Monday, 1 March 2021

ಆರ್ಥಿಕ ನಷ್ಟವಾಗಿರುವುದು ನಿಜ ಆದರೆ, ಎಲ್ಲಿಗೂ ಓಡಿ ಹೋಗಿಲ್ಲ, ಶೀಘ್ರದಲ್ಲೇ ಆರೋಪಗಳಿಂದ ಮುಕ್ತನಾಗುವೆ: ಉದ್ಯಮಿ ಬಿ.ಆರ್.ಶೆಟ್ಟಿ

 

ಆರ್ಥಿಕ ನಷ್ಟವಾಗಿರುವುದು ನಿಜ ಆದರೆ, ಎಲ್ಲಿಗೂ ಓಡಿ ಹೋಗಿಲ್ಲ, ಶೀಘ್ರದಲ್ಲೇ ಆರೋಪಗಳಿಂದ ಮುಕ್ತನಾಗುವೆ: ಉದ್ಯಮಿ ಬಿ.ಆರ್.ಶೆಟ್ಟಿ

ಉಡುಪಿ: ಆರ್ಥಿಕ ನಷ್ಟವಾಗಿರುವುದು ನಿಜ. ಆದರೆ, ಎಲ್ಲಿಯೂ ಓಡಿ ಹೋಗಿಲ್ಲ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಂದ ಹೊರಬರುತ್ತೇನೆಂದು ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರು ಹೇಳಿದ್ದಾರೆ.

ನ್ಯಾಯಾಲಯ ಸುಮಾರು ರೂ.2800 ಕೋಟಿ ಸಾಲ ಮರುಪಾವತಿ ಮಾಡದ ಆರೋಪವನ್ನು ಎದುರಿಸುತ್ತಿರುವ ಬಿ.ಆರ್.ಶೆಟ್ಟಿ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಭಾರತದಲ್ಲಿ ನಾನು ಒಂದು ರುಪಾಯಿ ಕೂಡ ಸಾಲ ಬಾಕಿ ಇಟ್ಟಿಲ್ಲ. ಆದರೆ, ನನ್ನ ಜೊತೆಗಿದ್ದವರೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ನಾನು ವಿಶ್ವಾಸ ಇಟ್ಟವರೇ ವಿಶ್ವಾಸಘಾತ ಮಾಡಿದ್ದಾರೆ. ಆದ್ದರಿಂದ ನಾನು ಆರೋಪ ಎದುರಿಸುತ್ತಿದ್ದೇನೆ. ಆದರೆ, ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ಇವೆಲ್ಲವನ್ನೂ ನಾನು ಎದುರಿಸುತ್ತೇನೆ ಮತ್ತು ಗೆಲ್ಲುತ್ತೇನೆ. ಲಕ್ಷ್ಮೀ ಬಹಳ ಚಂಚಲೆ. ಆದರೆ ನಾನು ಮಾತ್ರ ಗಟ್ಟಿಯಾಗಿ ನಿಂತಿದ್ದೇನೆಂದು ಹೇಳಿದ್ದಾರೆ.

ನನ್ನ ಮೇಲೆ ಇರುವ ಆರೋಪಕ್ಕಿಂತಲೂ ಹೆಚ್ಚು ಮೊತ್ತದ 12.8 ಬಿಲಿಯನ್ ಡಾಲರ್ ನಷ್ಟು ದುಡಿಯುವ ಬಂಡವಾಳ ನನ್ನ ಬಳಿ ಇದೆ. ವಿದೇಶದಲ್ಲಿ ಉದ್ಯಮ ಇದೆ. ದೇಶದಾದ್ಯಂತ 247ಕ್ಕೂ ಹೆಚ್ಚು ಆಸ್ಪತ್ರೆಗಳಿವೆ. ಇಂದಿಗೂ ನಾನು ಆರ್ಥಿಕವಾಗಿ ಪ್ರಬಲನಾಗಿದ್ದೇನೆ. ಅದೆಲ್ಲವೂ ನಾನು ಬೆವರು ಸುರಿಸಿ ದುಡಿದದ್ದು ಎಂದು ತಿಳಿಸಿದ್ದಾರೆ.

ಮಾಧ್ಯಮಗಳು ವಿಜಯಮಲ್ಯ, ನೀರವ್ ಮೋದಿಯಂತೆ ನಾನು ಕೂಡ ಓಡಿ ಹೋಗುತ್ತೇನೆಂದು ಹೇಳುತ್ತಿವೆ. ಆದರೆ, ನಾನು ಎಲ್ಲಿಗೂ ಓಡಿ ಹೋಗವುದಿಲ್ಲ. ಯಾರಿಗೂ ಮೋಸ ಮಾಡುವುದಿಲ್ಲ. ನನ್ನ ಆತ್ಮ ಶುದ್ಧವಾಗಿದೆ. ಜನರ ಪ್ರೀತಿ ನನ್ನ ಜೊತೆ ಇದೆ.

ಒಂದು ಕಾಲದಲ್ಲಿ ನನಗೆ ಸಾಲ ತೆಗೆದುಕೊಳ್ಳಿ ಎಂದು ಎಲ್ಲಾ ಬ್ಯಾಂಕುಗಳು ನನ್ನನ್ನು ಗೊಗರೆಯುತ್ತಿದ್ದವು. ಆದರೆ, ಇವತ್ತು ಅದೇ ಬ್ಯಾಂಕುಗಳು ನನ್ನ ಮೇಲೆ ಆರೋಪ ಹೊರಿಸಿವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬೇರೆ ವಿವರಗಳನ್ನು ನೀಡಲಾಗುವುದಿಲ್ಲ. ಆದರೆ, ಸತ್ಯ ಹೊರಗೆ ಬಂದೇ ಬರುತ್ತವೆ. ನಾನು ಮತ್ತೆ ದೇಶಕ್ಕಾಗಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ,

ಟ್ರಂಪ್ ಗೆ ಒಂದು ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ಯಾರಿಗೂ ನಾನು ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ. ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಆಗ ಸಾಲಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಯಾರಿಂದ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿದ್ದೇನೆ ಎಂದು ಹೇಳಿದರು.

ಮೋದಿ ನನಗೆ ಆತ್ಮೀಯರು ಎನ್ನುವುದು ನಿಜ. ಆದರೆ, ನಾನು ಅವರಿಂದ ನೆರವು ಯಾಚಿಸಿಲ್ಲ. ನಾನು ಪ್ರಧಾನಮಂತ್ರಿ ಜೊತೆ ಮಾತನಾಡಲು ಹೋದರೆ ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನೀರವ್ ಮೋದಿ, ವಿಜಯ್ ಮಲ್ಯ ಆಯ್ತು ಈಗ ಬಿ.ಆರ್.ಶೆಟ್ಟಿಯೂ ದಿವಾಳಿ ಎನ್ನುವ ಆರೋಪ ಹೊರಿಸಬಹುದು. ಹೀಗಾಗಿ ಯಾವ ಬಿಜೆಪಿ ಮುಖಂಡರನ್ನೂ ಮಾತನಾಡಿಸಲು ಹೋಗಿಲ್ಲ.

ಅಬು ಧಾಬಿಯಲ್ಲಿ ಅಲ್ಲಿಯ ದೊರೆ ಅರಮನೆ ಕಟ್ಟಿದಾಗ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಅಂದು ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ. ನಿಮ್ಮ 5 ಟ್ರಿಲಿಯನ್​ ಎಕಾನಮಿಗೆ ನನ್ನ 5 ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದೆ. ಅದನ್ನೆಲ್ಲಾ ಕೇಳಿದ ಅವರು ನನ್ನ ಪ್ರತಿಯೊಂದು ಮಾತಿನ ಮೇಲೂ ಭರವಸೆ ಇದೆ ಎಂದಿದ್ದರು. ಆದರೆ, ಈಗ ಮಾಧ್ಯಮಗಳು ಮಾಡುತ್ತಿರುವ ವರದಿಯನ್ನು ಕಂಡರೆ ಅವರು ಏನೆಂದುಕೊಳ್ಳುತ್ತಾರೆಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದರು.


SHARE THIS

Author:

0 التعليقات: