ಪಶ್ಚಿಮ ಬಂಗಾಳ: ವಲಸೆ ಬಂದವರಿಗೆ ಟಿಕೆಟ್: ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ಸಿನಿಂದ ವಲಸೆ ಬಂದ ಹಲವರನ್ನೇ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನಾಗಿಸಿದ ಪಕ್ಷದ ಕ್ರಮವನ್ನು ಖಂಡಿಸಿ ನೂರಾರು ಬಿಜೆಪಿ ಬೆಂಬಲಿಗರು ಪಕ್ಷದ ಕೊಲ್ಕತ್ತಾದಲ್ಲಿನ ಪಕ್ಷದ ಚುನಾವಣಾ ಕಚೇರಿಯ ಹೊರಗಡೆ ಸೋಮವಾರ ಪ್ರತಿಭಟನೆ ನಡೆಸಿದರಲ್ಲದೆ ಹಿರಿಯ ಬಿಜೆಪಿ ನಾಯಕರುಗಳಾದ ಮುಕುಲ್ ರಾಯ್, ಅರ್ಜುನ್ ಸಿಂಗ್ ಹಾಗೂ ಶಿವ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುವಾಹಟಿಯಿಂದ ದಿಲ್ಲಿಗೆ ತೆರಳುತ್ತಿದ್ದ ಕೇಂದ್ರ ಗೃಹ ಸಚಿವ ದಿಢೀರ್ ಆಗಿ ಕೊಲ್ಕತ್ತಾದಲ್ಲಿ ರಾತ್ರಿ ತಂಗಲು ನಿರ್ಧರಿಸಿದ ಹಾಗೂ ಇಂದು ನಡೆಯಲಿರುವ ಪ್ರಚಾರಾಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಿದ ದಿನದಂದೇ ಈ ಬೆಳವಣಿಗೆ ನಡೆದಿದೆ.
ನೂರಾರು ಬಿಜೆಪಿ ಬೆಂಬಲಿಗರು ಹೇಸ್ಟಿಂಗ್ಸ್ ಪ್ರದೇಶದಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯ ಹೊರಗಡೆ ಬ್ಯಾರಿಕೇಡುಗಳನ್ನು ದಾಟಿ ಕಟ್ಟಡದೊಳಗೆ ಪ್ರವೇಶಿಸಲು ಯತ್ನಿಸುತ್ತಿರುವ ವೀಡಿಯೋಗಳು ಹರಿದಾಡುತ್ತಿವೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಸೋಮವಾರ ಅಪರಾಹ್ನದಿಂದಲೇ ಪ್ರತಿಭಟನೆಗಳು ನಡೆದಿದ್ದು ಬಿಜೆಪಿ ಅಭ್ಯರ್ಥಿ ಮೋಹಿತ್ ಘಟಿ ಫೋಟೊ ಇರುವ ಪೋಸ್ಟರ್ ನಲ್ಲಿ "ಕುಡುಕರು ಹಾಗೂ ಚಾರಿತ್ರ್ಯಹೀನರು" ಎಂದು ಬರೆದು ಹಲವರು ಮೊದಲು ಪ್ರತಿಭಟನೆ ನಡೆಸಿದ್ದರು. ಸಂಜೆಯೊಳಗಾಗಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ತರುವಾಯ ರಾಜ್ಯದ ಸಿಂಗೂರ್ನಲ್ಲಿರುವ ಪಕ್ಷ ಕಚೇರಿ ಹಾಗೂ ಚಿನ್ಸುರಾದಲ್ಲಿರುವ ಬಿಜೆಪಿ ಜಿಲ್ಲಾ ಮುಖ್ಯ ಕಾರ್ಯಾಲಯದ ಕಚೇರಿಗಳಲ್ಲಿ ದಾಂಧಲೆ ನಡೆದಿದೆ.
ಸಿಂಗೂರ್ನಲ್ಲಿ ಮಾಜಿ ತೃಣಮೂಲ ಶಾಸಕ ರಬೀಂದ್ರನಾಥ್ ಭಟ್ಟಾಚಾರ್ಯ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ನೇಮಕಗೊಳಿಸಿದಂದಿನಿಂದ ಸಮಸ್ಯೆ ಆರಂಭಗೊಂಡಿತ್ತು. ಪಕ್ಷ ಸಂಘಟನಾ ಕಾರ್ಯಕ್ಕೆ ಆಗಮಿಸಿದ್ದ ಮಧ್ಯ ಪ್ರದೇಶ ಆರೋಗ್ಯ ಸಚಿವರನ್ನು ಕಾರ್ಯಕರ್ತರು ಅಂಗಡಿಯೊಂದರೊಳಗೆ ಕೂಡಿಟ್ಟ ಘಟನೆಯೂ ನಡೆದಿದ್ದು ಹಲವಾರು ಗಂಟೆಗಳ ನಂತರ ಪೊಲೀಸರು ಅವರನ್ನು ರಕ್ಷಿಸಿದರು.
0 التعليقات: