Tuesday, 2 March 2021

ಬೆಂಗಳೂರಿಗರೇ... ಸದ್ಯದಲ್ಲೇ ಕಾದಿದೆ ಮೂರು ದರ ಏರಿಕೆಗಳು

 

ಬೆಂಗಳೂರಿಗರೇ... ಸದ್ಯದಲ್ಲೇ ಕಾದಿದೆ ಮೂರು ದರ ಏರಿಕೆಗಳು

ಬೆಂಗಳೂರು,ಮಾ.3- ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ಸಿಲಿಂಡರ್‍ಗಳ ದರ ಏರಿಕೆಯಿಂದ ಹೈರಾಣಾಗಿರುವ ಬೆಂಗಳೂರು ಜನತೆಗೆ ಮತ್ತೆ ಮೂರು ಶಾಕ್‍ಗಳು ಕಾದಿದ್ದು, ಶೀಘ್ರದಲ್ಲೇ ಮಹಾನಗರಿಯಲ್ಲಿ ಹಾಲು, ಆಟೋ ಮತ್ತು ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಆಟೋ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದರ ನಡುವೆಯೇ ಹಾಲಿನ ದರ ಏರಿಕೆಗೂ ಕೆಎಂಎಫ್ ನಿರ್ಧರಿಸಿದೆ.

ಈ ಹಿಂದೆ ರಾಜ್ಯ ಸರ್ಕಾರ ಟ್ಯಾಕ್ಸಿ ದರವನ್ನು ಪರಿಷ್ಕರಿಸಿತ್ತು. ಮೊದಲ 4 ಕಿ.ಮೀ. ಗೆ ಹವಾನಿಯಂತ್ರಿತವಲ್ಲದ ಕಾರುಗಳಗಳ ದರ 75 ರೂ. ಮತ್ತು ಹವಾನಿಯಂತ್ರಿತ ಕ್ಯಾಬ್‍ಗಳ ದರ 100 ರೂ. ಎಂದು ದರ ಪರಿಷ್ಕರಣೆ ಮಾಡಿತ್ತು.

ಅಂತೆಯೇ ಎಸಿ ಕ್ಯಾಬ್‍ಗಳಿಗೆ ಪ್ರತೀ ಕಿಲೋಮೀಟರಿಗೆ 24 ರೂ. ಮತ್ತು ಎಸಿ ಅಲ್ಲದ ಟ್ಯಾಕ್ಸಿಗಳಿಗೆ 18 ರೂ. ದರ ನಿಗದಿ ಮಾಡಿತ್ತು. ಇದೀಗ ಅದೇ ರೀತಿಯಲ್ಲೇ ಆಟೋ ಪ್ರಯಾಣ ದರ ಮತ್ತು ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಎಸಿ ಮತ್ತು ಎಸಿ ರಹಿತ ಬಸ್‍ಗಳ ಟಿಕೆಟ್ ದರವನ್ನು ಶೇ.18-20ರಷ್ಟು ಹೆಚ್ಚಿಸಲು ಸಾರಿಗೆ ನಿಗಮವು ಪ್ರಸ್ತಾಪಿಸಿದೆ ಎಂದು ಹಿರಿಯ ಬಿಎಂಟಿಸಿ ಅಕಾರಿಯೊಬ್ಬರು ತಿಳಿಸಿದ್ದಾರೆ.

ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಕೋವಿಡ್ ಕಾರಣದಿಂದಾಗಿ ಬಿಎಂಟಿಸಿಯು ಆದಾಯ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ನಾವು ದರ ಹೆಚ್ಚಳವನ್ನು ಬಯಸುತ್ತಿದ್ದೇವೆ. ಈ ಸಂಬಂಧ ನಾವು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಸಂಪರ್ಕಿಸಿದ್ದೇವೆ. ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅವರು, ದರ ಏರಿಕೆ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಇನ್ನು ಇದೇ ವಾರ ರಾಜ್ಯ ಬಜೆಟ್ ಘೋಷಣೆಯಾಗಲಿದ್ದು, ಬಜೆಟ್ ಘೋಷಣೆ ಬಳಿಕ ಸರ್ಕಾರ ಈ ದರ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು, ಪ್ರಸ್ತುತ ಬಿಎಂಟಿಸಿ ದರವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಹೇಳಿದ್ದಾರೆ.

ಇನ್ನು ಆಟೊರಿಕ್ಷಾ ದರ ಏರಿಕೆ ಕುರಿತಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಮಾತನಾಡಿ, ಎಲ್‍ಪಿಜಿ ಬೆಲೆ ಏರಿಕೆಯಾಗಿರುವುದರಿಂದ ಚಾಲಕರ ಸಂಘಗಳು ಮೊದಲ 2 ಕಿ.ಮೀ.ಗೆ ಪ್ರಸ್ತುತ ಶುಲ್ಕವನ್ನು 25 ರೂ.ನಿಂದ 36 ರೂ.ಗೆ ಹೆಚ್ಚಿಸಲು ಬಯಸುತ್ತಿವೆ. ಈ ಕುರಿತು ಶೀಘ್ರದಲ್ಲೇ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.


SHARE THIS

Author:

0 التعليقات: