Sunday, 28 March 2021

ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆಯ ಕಿಚ್ಚು ಸೇನೆಯ ನರಮೇಧದ ವಿರುದ್ದ ವಿಶ್ವದಾದ್ಯಂತ ಆಕ್ರೋಶ


ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆಯ ಕಿಚ್ಚು
ಸೇನೆಯ ನರಮೇಧದ ವಿರುದ್ದ ವಿಶ್ವದಾದ್ಯಂತ ಆಕ್ರೋಶ

 ಯಾಂಗೊನ್,ಮಾ.28: ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಆಗ್ರಹಿಸಿ ರವಿವಾರವೂ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸೇನಾ ಪಡೆಗಳು ಶನಿವಾರ 100ಕ್ಕೂ ಅಧಿಕ ಮಂದಿ ಪ್ರಜಾಪ್ರಭುತ್ವ ಹೋರಾಟಗಾರರನ್ನು ಹತ್ಯೆಗೈದ ಮರುದಿನವೇ ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ಇನ್ನಷ್ಟು ತೀವ್ರಗೊಂಡಿವೆ.

  ದೇಶದ ಎರಡು ಅತಿ ದೊಡ್ಡ ನಗರಗಳಾದ ಯಾಂಗೊನ್ ಹಾಗೂ ಮ್ಯಾಂಡಲೆ ನಗರಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗಿಸಿರುವುದಾಗಿ ವರದಿಗಳು ತಿಳಿಸಿವೆ.

 ಆಂಗ್ ಸಾನ್ ಸೂ ಕಿ ನೇತೃತ್ವದ ಪ್ರಜಾತಾಂತ್ರಿಕ ಸರಕಾರವನ್ನು ಪದಚ್ಯುತಗೊಳಿಸಿದ ಸೇನಾಕ್ರಾಂತಿಯ ವಿರುದ್ಧ ಪ್ರತಿಭಟನೆಗಿಳಿದ ನಾಗರಿಕರ ವಿರುದ್ಧ ದಮನಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಶನಿವಾರ 114ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿದ್ದವು. ಭದ್ರತಾಪಡೆಗಳ ಗುಂಡಿಗೆ ಬಲಿಯಾದವರಲ್ಲಿ 16 ವರ್ಷಕ್ಕಿಂತ ಕೆಳವಯಸ್ಸಿನ ಹಲವಾರು ಮಕ್ಕಳೂ ಕೂಡಾ ಸೇರಿದ್ದಾರೆಂದು ವರದಿಗಳು ತಿಳಿಸಿವೆ.

  ಮ್ಯಾನ್ಮಾರ್‌ನಲ್ಲಿ ಭದ್ರತಾಪಡೆಗಳು ನಡೆಸಿದ ರಕ್ತಪಾತವನ್ನು ವಿಶ್ವಸಂಸ್ಧೆ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿಯೊ ಗ್ಯುಟೆರಸ್ ಬಲವಾಗಿ ಖಂಡಿಸಿದ್ದಾರೆ. ‘‘ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಮನಕಾರ್ಯಾಚರಣೆಯ ಮುಂದುವರಿಕೆಯು ಅಸ್ವೀಕಾರಾರ್ಹವಾದುದು ಹಾಗೂ ಅದರ ವಿರುದ್ಧ ಸದೃಢ, ಏಕೀಕೃತ ಮತ್ತು ದೃಢನಿಶ್ಚಯದ ಪ್ರತಿಕ್ರಿಯೆಯ ಅಗತ್ಯವಿದೆ’’ ಎಂದವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

 ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮ್ಯಾನ್ಮಾರ್‌ನಲ್ಲಿ ಭದ್ರತಾಪಡೆಗಳು ನಡೆಸಿದ ನರಮೇಧಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘‘ ಬರ್ಮಾದ ಭದ್ರತಾಪಡೆಗಳು ನಡೆಸಿದ ರಕ್ತಪಾತದಿಂದ ದಿಗ್ಬ್ರಾಂತನಾಗಿದ್ದೇನೆ. ಕೆಲವೇ ಜನರ ಹಿತಾಸಕ್ತಿಗಾಗಿ ಜುಂಟಾ (ಮ್ಯಾನ್ಮಾರ್ ಸೇನಾಡಳಿತ)ವು ಜನರ ಪ್ರಾಣಗಳನ್ನು ಬಲಿತೆಗೆದುಕೊಳ್ಳುತ್ತಿದೆ’’ಎಂದವರು ಹೇಳಿದರು.

 ಮ್ಯಾನ್ಮಾರ್ ಹತ್ಯಾಕಾಂಡವನ್ನು ಖಂಡಿಸಿ ಆಸ್ಟ್ರೇಲಿಯ, ಕೆನಡ, ಜರ್ಮನಿ, ಗ್ರೀಸ್. ಇಟಲಿ,ಜಪಾನ್,ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ದಕ್ಷಿಣ ಕೊರಿಯ, ಬ್ರಿಟನ್ ಹಾಗೂ ಅಮೆರಿಕ ಸೇರಿದಂತೆ 12 ರಾಷ್ಟ್ರಗಳ ಸೇನಾ ವರಿಷ್ಠರು ಹೇಳಿಕೆಯೊಂದನ್ನು ನೀಡಿದ್ದು, ನಿಶಸ್ತ್ರಧಾರಿ ವ್ಯಕ್ತಿಗಳ ವಿರುದ್ಧ ಬಲಪ್ರಯೋಗವನ್ನು ಖಂಡಿಸಿದ್ದಾರೆ.


 SHARE THIS

Author:

0 التعليقات: