Tuesday, 9 March 2021

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಫ್ಯಾಕ್ಟರಿಗಳಿವೆ :ಗೃಹ ಸಚಿವ ಹೇಳಿಕೆಯ ಬಗ್ಗೆ ಗೃಹಸಚಿವಾಲಯದಲ್ಲೇ ಮಾಹಿತಿ ಇಲ್ಲ!


 ಪಶ್ಚಿಮ ಬಂಗಾಳದಲ್ಲಿ ಬಾಂಬ್ ಫ್ಯಾಕ್ಟರಿಗಳಿವೆ :ಗೃಹ ಸಚಿವ ಹೇಳಿಕೆಯ ಬಗ್ಗೆ ಗೃಹಸಚಿವಾಲಯದಲ್ಲೇ ಮಾಹಿತಿ ಇಲ್ಲ!

ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ಬಾಂಬ್ ತಯಾರಿಸುವ ಫ್ಯಾಕ್ಟರಿಗಳಿವೆ ಎಂಬ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಆಂತರಿಕ ಮಾಹಿತಿ ಇದ್ದರೂ, ಅವರ ಗೃಹ ಸಚಿವಾಲಯಕ್ಕೆ ಮಾತ್ರ ಈ ಬಗ್ಗೆ ಮಾಹಿತಿ ಇಲ್ಲ !

ಕಳೆದ ಅಕ್ಟೋಬರ್‌ನಲ್ಲಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೃಹ ಸಚಿವ ಅಮಿತ್ ಶಾ, "ಬಾಂಬ್ ತಯಾರಿಕಾ ಫ್ಯಾಕ್ಟರಿಗಳು ಪಶ್ಚಿಮ ಬಂಗಾಳದ ಪ್ರತಿ ಜಿಲ್ಲೆಯಲ್ಲಿವೆ" ಎಂದು ಹೇಳಿದ್ದರು. ಆದರೆ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ "ಅಮಿತ್ ಶಾ ಅವರ ಹೇಳಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಿಲ್ಲ" ಎಂಬ ಉತ್ತರ ದೊರಕಿದೆ ಎಂದು ಪಾರದರ್ಶಕತೆ ಹೋರಾಟಗಾರ ಸಾಕೇತ್ ಗೋಖಲೆ ವಿವರಿಸಿದ್ದಾರೆ.

ಈ ಕುರಿತ ನಿಖರ ಮಾಹಿತಿಗೆ ಬಂಗಾಳ ಪೊಲೀಸರನ್ನು ಸಂಪರ್ಕಿಸುವಂತೆ ಗೃಹ ಸಚಿವಾಲಯ ಗೋಖಲೆಯವರಿಗೆ ಸಲಹೆ ಮಾಡಿದೆ.

"ನೀವು ಕೇಳಿದ ಪ್ರಶ್ನೆ 1ರಿಂದ3ಕ್ಕೆ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿ (ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ) ಕಚೇರಿಯಲ್ಲಿ ಯಾವುದೇ ಮಾಹಿತಿ ಇಲ್ಲ" ಎಂದು ಮಾರ್ಚ್ 3ರಂದು ನೀಡಿದ ಉತ್ತರದಲ್ಲಿ ಹೇಳಲಾಗಿದೆ. ಇದನ್ನು ಗೋಖಲೆ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವಾಲಯದಿಂದ ಕೇಳಿದ ಸ್ಪಷ್ಟನೆಗೆ ಯಾವುದೇ ಉತ್ತರ ಸಿಕ್ಕಿಲ್ಲ.

ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಗಾಳಿಗೆ ತೂರಲಾಗಿದೆ ಎಂದು ಟಿವಿ ಸಂದರ್ಶನದಲ್ಲಿ ಅಮಿತ್ ಶಾ ಆಪಾದಿಸಿದ್ದರು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಬಾಂಬ್ ತಯಾರಿಕಾ ಫ್ಯಾಕ್ಟರಿಗಳಿವೆ ಎಂದು ಹೇಳಿದ್ದರು.

ಅಮಿತ್ ಶಾ ಉಲ್ಲೇಖಿಸಿದಂತೆ ಬಂಗಾಳದಲ್ಲಿರುವ ಬಾಂಬ್ ಫ್ಯಾಕ್ಟರಿಗಳ ಜಿಲ್ಲಾವಾರು ವಿವರ ನೀಡುವಂತೆ ಗೋಖಲೆ ಕೋರಿದ್ದರು. ಅಂತೆಯೇ ಈ ಬಗ್ಗೆ ಶಾ ಅವರಿಗೆ ಗೃಹ ಸಚಿವಾಲಯ ಮಾಹಿತಿ ನೀಡಿದೆಯೇ ಎಂದೂ ಪ್ರಶ್ನಿಸಿದ್ದರು. ಜತೆಗೆ ಶಾ ಅವರ ಹೇಳಿಕೆ ಯಾವುದೇ ಏಜೆನ್ಸಿಯ ಅಧಿಕೃತ ಮಾಹಿತಿ/ ದಾಖಲೆಗಳನ್ನು ಆಧರಿಸಿದೆಯೇ ಎಂದು ಪ್ರಶ್ನಿಸಿದ್ದರು.


SHARE THIS

Author:

0 التعليقات: