Friday, 12 March 2021

ಟೂಲ್‌ಕಿಟ್‌ ಪ್ರಕರಣ: ಮತ್ತೊಬ್ಬ ಆರೋಪಿಗೆ ಬಂಧನದಿಂದ ರಕ್ಷಣೆ

 

ಟೂಲ್‌ಕಿಟ್‌ ಪ್ರಕರಣ: ಮತ್ತೊಬ್ಬ ಆರೋಪಿಗೆ ಬಂಧನದಿಂದ ರಕ್ಷಣೆ

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪ ಹೊತ್ತಿರುವ ಪರಿಸರ ಕಾರ್ಯಕರ್ತ ಶುಭಮ್‌ ಕರ್‌ ಚೌಧರಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮೂರು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಚೌಧರಿ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ಮನವಿ ಮಾಡಿದರು. ನಂತರ ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ಧರ್ಮೇಂದರ್‌ ರಾಣಾ ಅವರು ಆರೋಪಿಗಳಿಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದರು.

ಚೌಧರಿ ಅವರಿಗೆ ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠ ಇತ್ತೀಚೆಗೆ ಸಾರಿಗೆ ಜಾಮೀನು ನೀಡಿತ್ತು. ಇದೇ ಪ್ರಕರಣ ಸಹ ಆರೋಪಿಗಳಾದ ಪರಿಸರ ಕಾರ್ಯಕರ್ತೆ ದಿಶಾ ರವಿ ಮತ್ತು ಶಾಂತನು ಮುಕುಲ್‌ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ಅರ್ಜಿಯ ವಿಚಾರಣೆ ಮಾರ್ಚ್‌ 15ರಂದು ನಡೆಯಲಿರುವ ಕಾರಣ, ಅಲ್ಲಿಯವರೆಗೂ ಈ ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಮುಂದಿನ ವಿಚಾರಣೆಯ ದಿನಾಂಕದವರೆಗೆ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿತು.


SHARE THIS

Author:

0 التعليقات: