ಮ್ಯಾನ್ಮಾರ್ ಸೇನೆಯಿಂದ ಥೈಲ್ಯಾಂಡ್ ಗಡಿ ಬಳಿ ವಾಯುದಾಳಿ
ಯಾಂಗೂನ್, ಮಾ.28: ಮ್ಯಾನ್ಮಾರ್ನ ಸೇನಾ ಫೈಟರ್ ಜೆಟ್ಗಳು ಶನಿವಾರ ಥೈಲ್ಯಾಂಡ್ನ ಗಡಿಪ್ರದೇಶಕ್ಕೆ ತಾಗಿಕೊಂಡಿರುವ ಸಶಸ್ತ್ರಧಾರಿ ಬಂಡುಕೋರ ಗುಂಪೊಂದರ ನಿಯಂತ್ರಣದಲ್ಲಿರುವ ಹಳ್ಳಿಯೊಂದರ ಮೇಲೆ ವಾಯುದಾಳಿ ನಡೆಸಿದೆ.
ಮ್ಯಾನ್ಮಾರ್ ಸೇನೆಯ ಫೈಟರ್ ಜೆಟ್ಗಳು ಪಪುವಾ ಜಿಲ್ಲೆಯಲ್ಲಿರುವ ಡೇ ಪು ನೊ ಗ್ರಾಮದ ಮೇಲೆ ಶನಿವಾರ ರಾತ್ರಿ 8:00 ಗಂಟೆಯ ವೇಳೆಗೆ ದಾಳಿ ನಡೆಸಿರುವುದಾಗಿ ಮ್ಯಾನ್ಮಾರ್ನ ವಾಯವ್ಯ ಪ್ರಾಂತ್ಯದ ಮೇಲೆ ನಿಯಂತ್ರಣವನ್ನು ಹೊಂದಿರುವ ಕರೆನ್ ನ್ಯಾಶನಲ್ ಯೂನಿಯನ್ (ಕೆಎನ್ಯು) ತಿಳಿಸಿದೆ. ವಾಯುದಾಳಿಗೆ ಬೆದರಿ ಜನರು ಮನೆಗಳನ್ನು ತೊರೆದು ಪಲಾಯನಗೈದರೆಂದು ಅದು ಹೇಳಿದೆ.
ಘಟನೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆಂದು ನಾಗರಿಕ ಹಕ್ಕುಗಳ ಸಂಘಟನೆ ‘ಕರೆನ್ ಪೀಸ್ ಸಪೋರ್ಟ್ ನೆಟ್ವರ್ಕ್’ ತಿಳಿಸಿದೆ. ವಾಯುದಾಳಿಗೆ ತುತ್ತಾಗಿರುವ ಹಳ್ಳಿಯು ದುರ್ಗಮ ಪ್ರದೇಶವಾಗಿರುವುದರಿಂದ ಅಲ್ಲಿಗೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆಂದು ಅವರು ಹೇಳಿದ್ದಾರೆ.
0 التعليقات: