Saturday, 13 March 2021

ಅಂಬಾನಿ ಮನೆ ಸಮೀಪ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅರೆಸ್ಟ್


ಅಂಬಾನಿ ಮನೆ ಸಮೀಪ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ  ಅರೆಸ್ಟ್

ಮುಂಬೈ: ಪ್ರತಿಷ್ಠಿತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದೆದುರು ಸ್ಪೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಎನ್ ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಸಚಿನ್ ವಾಜೆ ಅವರನ್ನು ಎನ್ ಐಎ ಬಂಧಿಸಿದೆ.

ಫೆ.25ರಂದು ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಕಾರ್ಪಿಯೋ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರಗಳು ದೊರೆತಿದ್ದವು. ಈ ಮೊದಲು ಈ ಪ್ರಕರಣದ ತನಿಖೆಯನ್ನು ಸಚಿನ್ ವಾಜೆ ಅವರಿಗೆ ವಹಿಸಲಾಗಿತ್ತು. ನಂತರ ಎನ್ ಐಎ ಗೆ ಕೇಸು ಹಸ್ತಾಂತರವಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಿಗೂಢ ರೀತಿಯಲ್ಲಿ ಮೃತಪಟ್ಟ ಆಟೊ ಬಿಡಿಭಾಗಗಳ ಮಾರಾಟಗಾರ ಮನ್ಸುಖ್ ಹಿರೇನ್ ಸಾವಿಗೆ ಸಚಿನ್ ಕಾರಣ ಎಂದು ಮನ್ಸುಖ್ ಪತ್ನಿ ಆರೋಪಿಸಿದ್ದರು. ವಿಚಾರಣೆಗೆ ಹಾಜರಾಗಿದ್ದ ಸಚಿನ್ ಅವರನ್ನು ಸುಮಾರು 12 ಗಂಟೆಗಳ ಕಾಲ ಪ್ರಶ್ನಿಸಿ ನಂತರ ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

ಫೆಬ್ರವರಿ 25ರಂದು ದಕ್ಷಿಣ ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದ ಎದುರು ಸ್ಫೋಟಕಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ವಾಹನ ಪತ್ತೆಯಾಗಿತ್ತು. ಅದರ ಮೂಲ ಮಾಲೀಕ ಥಾಣೆಯ ನಿವಾಸಿ ಮನ್ಸುಖ್ ಹಿರೇನ್, ತಮ್ಮ ವಾಹನ ಕಳುವಾಗಿತ್ತು ಎಂದು ಹೇಳಿದ್ದರು. ಮಾರ್ಚ್ 5ರಂದು ಥಾಣೆಯ ಕೊಳ್ಳವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಸ್ಫೋಟಕಗಳು ತುಂಬಿದ್ದ ಕಾರನ್ನು ಫೆ 25ರಂದು ಅಂಬಾನಿ ನಿವಾಸದ ಮುಂದೆ ತಂದಿರಿಸುವಲ್ಲಿ ಸಚಿನ್ ವಾಜೆ ಅವರ ಪಾತ್ರವಿದೆ ಎಂದು ಎನ್ ಐಎ ಮೂಲಗಳು ತಿಳಿಸಿದೆ.



SHARE THIS

Author:

0 التعليقات: