Wednesday, 31 March 2021

ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ !

 

ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ !

ಕೊಲ್ಕತ್ತಾ : ಬಿಜೆಪಿಗೆ ಸೇರ್ಪಡೆಗೊಂಡ ತಮ್ಮ ಪಕ್ಷದ ಮಾಜಿ ನಾಯಕರೊಂದಿಗೆ ಮಾತನಾಡುವುದು ಅಪರಾಧವಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ನಾಯಕ ಪ್ರೇಲೆ ಪಾಲ್ ಅವರೊಂದಿಗಿನ ಸಂಭಾಷಣೆ ಎಂದು ಹೇಳಲಾದ ಆಡಿಯೋ ಸೋರಿಕೆಯಾದ ಹಿನ್ನಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು, ಆರಂಭದಲ್ಲಿ ನಿರಾಕರಿಸಿತ್ತಾದರೂ, ಸಂವಹನವು ನಡೆದಿದೆ ಎಂದು ಪಕ್ಷ ಹೇಳಿದೆ.

ಈ ಸಂಭಾಷಣೆಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ಹೌದು ನಾನು ಆ ಬಿಜೆಪಿ ನಾಯಕರಿಗೆ ಕರೆ ಮಾಡಿದ್ದೆ. ಅವರ ಸಂಖ್ಯೆ ಸಿಕ್ಕಿದಾಗ ನಾನು ಅವರಲ್ಲಿ ಮಾತನಾಡಿದ್ದೇನೆ. ಚೆನ್ನಾಗಿರಿ, ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದೆ. ಇದರಲ್ಲಿ ನನ್ನದೇನು ಅಪರಾದವಿದೆ..? ಎಂದು ಅವರು ಪ್ರಶ್ನಿಸಿದ್ದಾರೆ.

ನಾನೊಂದು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಯಾರ ಸಹಾಯ ಬೇಕಾದರೂ ಪಡೆದುಕೊಳ್ಳಬಹುದು. ಯಾರಲ್ಲಿ ಬೇಕಾದರೂ ಮಾತನಾಡಬಹುದು. ಅದರಲ್ಲಿ ಏನೂ ತಪ್ಪಿಲ್ಲ. ಅಪರಾಧ ಏನಿದೆ ಅದರಲ್ಲಿ..? ಪಕ್ಷಾಂತರಗೊಂಡವರಲ್ಲಿ ನಾನು ಮಾತಾಡಿದ್ದು, ಇದೇ ಮೊದಲಲ್ಲ, ಈ ಹಿಂದೆಯೂ ನಾನು ಸಂಪರ್ಕಿಸಿದ್ದೇನೆ. ಆದರೇ, ಸಂಭಾಷಣೆಯನ್ನು ಯಾರಾದರೂ ವೈರಲ್ ಮಾಡಿದರೆ, ಅದು ಅಪರಾಧ. ಸಂಭಾಷಣೆಯನ್ನು ವೈರಲ್ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

'ನಂದಿಗ್ರಾಮ್ ಗೆಲ್ಲಲು ನೀವು ನಮಗೆ ಸಹಾಯ ಮಾಡಬೇಕು. ನೋಡಿ, ನಿಮಗೆ ಕೆಲವು ಅಡಚಣೆಗಳಿವೆ ಎಂದು ನನಗೆ ತಿಳಿದಿದೆ, ಅದು ಅಧಿಕಾರಿಯ ಕಾರಣದಿಂದ ಎನ್ನುವುದು ಕೂಡ ತಿಳಿದಿದೆ” ಎಂದು ಬ್ಯಾನರ್ಜಿ ಅವರು ಸುವೇಂದು ಅಧಿಕಾರಿಯ ಬೆಂಬಲಿಗರಾದ ಪಾಲ್ ಅವರಿಗೆ ಹೇಳುವುದನ್ನು ಆಡಿಯೋದಲ್ಲಿ ಗಮನಿಸಬಹುದಾಗಿದೆ. “ಇನ್ನು ಮುಂದೆ ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಬ್ಯಾನರ್ಜಿ ಭರವಸೆ ನೀಡುವುದನ್ನೂ ಕೂಡ ಆಡಿಯೋದಲ್ಲಿ ಕೇಳಬಹುದು.

ಇನ್ನು, ಪಾಲ್ ಕೂಡ ಮಮತಾ ಬ್ಯಾನರ್ಜಿ ಅವರಿಗೆ ಸಂಭಾಷಣೆಯಲ್ಲಿ ಪ್ರತಿಕ್ರಿಯಿಸಿದ್ದು, ದೀದಿ ನೀವು ಕರೆ ಮಾಡಿರುವ ಬಗ್ಗೆ ನನಗೆ ಗೌರವವಿದೆ. ನಾನು ಸುವೇಂದು ಅಧಿಕಾರಿಯವರೊಂದಿಗಿದ್ದೇನೆ. ಹಾಗಾಗಿ ನಾನು ಅವರಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳ ವರದಿಗಾರರಿಗೆ ಸ್ಪಂದಿಸಿದ ಬಿಜೆಪಿ ನಾಯಕ ಪಾಲ್, ತೃಣಮೂಲಕ್ಕೆ ಮರಳಿ ಬನ್ನಿ ಎಂಬ ಮಮತಾ ಬ್ಯಾನರ್ಜಿ ಅವರ ಮಾತನ್ನು ನಾನು ತಿರಸ್ಕರಿಸಿದ್ದೇನೆ. ನಾನು ಈಗ ಬಿಜೆಪಿಗೆ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು, ಆಡಿಯೋ ಸಂಭಾಷಣೆಯ ಬಗ್ಗೆ ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅಧಿಕಾರವನ್ನು ಚುನಾವಣೆಯ ಹಿನ್ನಲೆಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೊಶ ಹೊರ ಹಾಕಿದೆ.

ಬಿಜೆಪಿಯ ಬಂಗಾಳ ಉಸ್ತುವಾರಿ, ಕೈಲಾಶ್ ವಿಜಯವರ್ಗಿಯಾ ನೇತೃತ್ವದ ನಿಯೋಗವು ಚುನಾವಣಾ ಆಯೋಗಕ್ಕೆ ಮಮತಾ ಹಾಗೂ ಪಾಲ್ ಸಂಭಾಷಣೆಯ ಆಡಿಯೋವನ್ನು ನೀಡುವುದರ ಮೂಲಕ ಮಮತಾ ವಿರುದ್ಧ ದೂರು ನೀಡಿದೆ ಎಂಬ ವರದಿಯಾಗಿದೆ.


SHARE THIS

Author:

0 التعليقات: