Monday, 29 March 2021

ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ; ದೀದಿ ಬಲಪ್ರದರ್ಶನ


ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ; ದೀದಿ ಬಲಪ್ರದರ್ಶನ

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಲಿಕುರ್ಚಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾಣೆಯ ಎರಡನೇ ಹಂತದಲ್ಲಿ ಏಪ್ರಿಲ್ 1ರಂದು ನಂದಿಗ್ರಾಮದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕರೊಂದಿಗೆ ಮಮತಾ ಗಾಲಿಕುರ್ಚಿಯಲ್ಲಿ ರೇಯಾಪರಾ ಖುದಿರಾಮ್ ಮೋರ್‌ನಿಂದ ಠಾಕೂರ್‌ಚೌಕ್‌ ವರೆಗೆ 8 ಕಿ.ಮೀ. ಉದ್ದರ ರೋಡ್ ಶೋವನ್ನು ಮುನ್ನಡೆಸಿದರು. ಈ ವೇಳೆ ಸಾವಿರಾರು ಪಕ್ಷದ ಕಾರ್ಯಕರ್ತರು ಮಮತಾ ಪರ ಘೋಷಣೆ ಕೂಗಿದರು. ಮಧ್ಯಾಹ್ನದ ಬಳಿಕ ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಸಕ್ತ ತಿಂಗಳಲ್ಲಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರದ ವೇಳೆ ಅಪರಿಚಿತರು ತಳ್ಳಿದ ಪರಿಣಾಮ ಮಮತಾ ಕಾಲಿಗೆ ನೋವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಾಗಿದ್ದರೂ ಮಮತಾ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿ ಹಾಕಿತ್ತು.

ಈ ಘಟನೆಯ ಬಳಿಕ ನಂದಿಗ್ರಾಮದಲ್ಲಿ ನಡೆಸಿದ ಮೊದಲ ಪಾದಯಾತ್ರೆ ಇದಾಗಿದೆ.

ಮಮತಾ ಆಪ್ತರಾಗಿದ್ದ ಸುವೇಂದು ಅಧಿಕಾರಿ ಕಳೆದ ವರ್ಷಾಂತ್ಯದಲ್ಲಿ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ ಮಮತಾ ವಿರುದ್ಧ ನಂದಿಗ್ರಾಮದಲ್ಲಿ ನೇರ ಸ್ಪರ್ಧೆಗಿಳಿದಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ 50,000ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವುದಾಗಿ ಸುವೇಂದು ಅಧಿಕಾರಿ ಹೇಳಿಕೆ ನೀಡಿದ್ದರು. ಸುವೇಂದು ಬೆಂಬಲಕ್ಕಾಗಿ ಕೇಂದ್ರದಿಂದ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.


SHARE THIS

Author:

0 التعليقات: