Monday, 15 March 2021

ಅಧಿವೇಶನದಲ್ಲಿ ಸಚಿವರು ಕಡ್ಡಾಯವಾಗಿ ಹಾಜರಿರಬೇಕು : ಸಿಎಂ ಕಟ್ಟಾದೇಶ


 ಅಧಿವೇಶನದಲ್ಲಿ ಸಚಿವರು ಕಡ್ಡಾಯವಾಗಿ ಹಾಜರಿರಬೇಕು : ಸಿಎಂ ಕಟ್ಟಾದೇಶ

ಬೆಂಗಳೂರು: ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಚಿವರು ಯಾವುದೇ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳದೆ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರ ಜೊತೆ ನಡೆದ ಔಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು ಸದನಕ್ಕೆ ಹಾಜರಾಗದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಬಜೆಟ್ ಅವೇಶನ ಮುಗಿಯುವವರೆಗೂ ಯಾವುದೇ ಸಚಿವರು ಹಾಗೂ ಶಾಸಕರು ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಾಗಲಿ ಅಥವಾ ಬೇರೆ ಕಡೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಾರದು. ಸದಸ್ಯರು ಕೇಳುವ ಪ್ರಶ್ನೆಗೆ ಹಾಜರಿದ್ದು ಉತ್ತರ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಸಚಿವರು ಸದನಕ್ಕೆ ಪದೇ ಪದೇ ಗೈರು ಹಾಜರಾಗುವುದು ಒಳ್ಳೆಯದಲ್ಲ. ನೀವು ಸದನದಲ್ಲಿ ಗೈರಾಗುವ ಕಾರಣ ಪ್ರತಿಪಕ್ಷದವರು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಸಭಾಧ್ಯಕ್ಷರು ಸೂಚನೆ ಕೊಟ್ಟಾಗಲೂ ನೀವು ಸದನಕ್ಕೆ ಬಾರದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಆಡಳಿತ ಇಲ್ಲವೇ ಪ್ರತಿಪಕ್ಷದ ಯಾವುದೇ ಸದಸ್ಯರು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಬೇಕು. ಈ ಅಧಿವೇಶನ ಮುಗಿಯುವವರೆಗೂ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಸಲಹೆ ಮಾಡಿದ್ದಾರೆ.

ಉಳಿದಂತೆ ಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ನಾವು ಸದನದಲ್ಲಿ ಒಗ್ಗಟಾಗಿ ಹೋರಾಟ ನಡೆಸಬೇಕು. ಅವರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಸಮರ್ಪಕ ಉತ್ತರ ನೀಡಬೇಕು. ಹಿರಿಯ ಸಚಿವರು ಸದನದಲ್ಲಿ ಹಾಜರಿದ್ದು, ಸರ್ಕಾರವನ್ನು ಹೆಚ್ಚು ಸಮರ್ಥಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಉಳಿದಂತೆ ಮುಂಬರುವ ಉಪಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಯಾವುದೇ ಸಂದರ್ಭದಲ್ಲೂ ಎದುರಾಗಬಹುದಾದ ಮಸ್ಕಿ, ಬಸವಕಲ್ಯಾಣ ಹಾಗೂ ಸಿಂಧಗಿ ಕ್ಷೇತ್ರಗಳ ಉಪಚನಾವಣೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಈ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಮತದಾರರು ನಮ್ಮ ಪರವಾಗಿದ್ದಾರೆ ಎಂಬುದನ್ನು ರುಜುವಾತು ಮಾಡಬೇಕು.

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲರೂ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ. ಉಪಚುನಾವಣೆ ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಇಲ್ಲಿ ನಾವು ಗೆದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗೆಲ್ಲಲು ಸುಲಭವಾಗುತ್ತದೆ.

ಹೀಗಾಗಿ 4 ಕ್ಷೇತ್ರಗಳ ಉಪಚುನಾವಣೆಯನ್ನು ಎಲ್ಲರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಸಿಎಂ ಸೂಚಿಸಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ವಿವಾದ ಬಗ್ಗೆ ಪ್ರತಿಪಕ್ಷಗಳು ಏನಾದರೂ ಸದನದಲ್ಲಿ ಕೆಣಕಿದರೆ ಸಮರ್ಪಕ ಉತ್ತರ ನೀಡಬೇಕೆಂದು ಹೇಳಿದರು.


SHARE THIS

Author:

0 التعليقات: