Wednesday, 24 March 2021

ರಾಮಮಂದಿರ ನಿರ್ಮಾಣ: ಆರ್‌ಎಸ್‌ಎಸ್‌ ಸ್ವಯಂ ಸೇವಕರಿಂದ ₹57 ಕೋಟಿ ನಿಧಿ ಸಂಗ್ರಹ

 


ರಾಮಮಂದಿರ ನಿರ್ಮಾಣ: ಆರ್‌ಎಸ್‌ಎಸ್‌ ಸ್ವಯಂ ಸೇವಕರಿಂದ ₹57 ಕೋಟಿ ನಿಧಿ ಸಂಗ್ರಹ

ನಾಗ್ಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಸ್ವಯಂ ಸೇವಕರು ಮಹಾರಾಷ್ಟ್ರದ ವಿದರ್ಭ ಪ್ರದೇಶದ 27 ಲಕ್ಷ ಕುಟುಂಬಗಳಿಂದ ₹57 ಕೋಟಿ ನಿಧಿ ಸಂಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ನ ವಿದರ್ಭ ಪ್ರಾಂತ ಕಾರ್ಯವಾಹ ದೀಪಕ್ ತಮ್‌ಶೆಟ್ಟಿವಾರ್, 'ಇತ್ತೀಚೆಗೆ ಪೂರ್ಣಗೊಂಡ ವಿಶೇಷ ನಿಧಿ ಸಂಗ್ರಹ ಅಭಿಯಾನದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 7,512 ಮಹಿಳೆಯರು ಸೇರಿದಂತೆ 70,796 ಆರ್‌ಎಸ್‌ಎಸ್ ಸ್ವಯಂಸೇವಕರು ವಿದರ್ಭದ 12,310 ಗ್ರಾಮಗಳ 27,67,991 ಕುಟುಂಬಗಳನ್ನು ಭೇಟಿಯಾಗಿ, ₹57 ಕೋಟಿ ನಿಧಿ ಸಂಗ್ರಹಿಸಿದ್ದಾರೆ' ಎಂದರು.

ದೇಶದಲ್ಲಿ ಸುಮಾರು 80 ಸಾವಿರ ಮಹಿಳೆಯರು ಸೇರಿದಂತೆ 20.64 ಲಕ್ಷ ಸ್ವಯಂ ಸೇವಕರು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ 5.45 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿನ 12.42 ಕೋಟಿಗೂ ಹೆಚ್ಚು ಕುಟುಂಬಗಳನ್ನು ಭೇಟಿಯಾಗಿದ್ದಾರೆ ಎಂದು ಅವರು ವಿವರಿಸಿದರು. ಆದರೆ, ಈ ಅಭಿಯಾನದ ಅಡಿ ದೇಶದಾದ್ಯಂತ ಎಷ್ಟು ಮೊತ್ತ ಸಂಗ್ರಹವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ದೀಪಕ್ ಹೇಳಿದರು.

'ಇತ್ತೀಚೆಗೆ ಆರ್‌ಎಸ್‌ಎಸ್‌ನ ಸರಕಾರ್ಯವಾಹಕರಾಗಿ ಆಯ್ಕೆಯಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಶೀಘ್ರದಲ್ಲೇ ನಾಗ್ಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಿಂದ ಕೆಲಸ ಮಾಡಲು ಪ್ರಾರಂಭಿಸುತ್ತಾರೆ' ಎಂದು ತಮ್‌ಶೆಟ್ಟಿವಾರ್ ಹೇಳಿದರು.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿಗಳ (ಎಪಿಬಿಎಸ್‌) ವಾರ್ಷಿಕ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್‌ಎಸ್‌ಎಸ್‌ನ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರನ್ನಾಗಿ ಆಯ್ಕೆ ಮಾಡಲಾಗಿದೆ.


SHARE THIS

Author:

0 التعليقات: