ಮತ್ತೆ 50 ಸಾವಿರ ಗಡಿ ದಾಟಿದ ಕೋವಿಡ್ ಪ್ರಕರಣ
ಹೊಸದಿಲ್ಲಿ : ಭಾರತದಲ್ಲಿ ಐದು ತಿಂಗಳ ಗರಿಷ್ಠ ಕೋವಿಡ್-19 ಸೋಂಕು ಪ್ರಕರಣ ಬುಧವಾರ ದಾಖಲಾಗಿದೆ. ದೇಶದಲ್ಲಿ ಒಂದೇ ದಿನ 53,364 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ ವರ್ಷ ಅ. 23ರಂದು 54,350 ಪ್ರಕರಣಗಳು ದಾಖಲಾದ ಬಳಿಕ ಬುಧವಾರ ಇಷ್ಟೊಂದು ಗರಿಷ್ಠ ಪ್ರಮಾಣದ ಏರಿಕೆ ಕಂಡುಬಂದಿದೆ.
ಸೆ. 17ರಂದು ಗರಿಷ್ಠ ಮಟ್ಟ ತಲುಪಿದ ಬಳಿಕ ಅಕ್ಟೋಬರ್ ಉತ್ತರಾರ್ಧದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿತ್ತು. ಆದರೆ ಈ ಬಾರಿ ಕ್ಷಿಪ್ರವಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ. ಭಾರತದಲ್ಲಿ ಮೊದಲ ಅಲೆ ಸೆಪ್ಟೆಂಬರ್ 17ರಂದು ಉತ್ತುಂಗವನ್ನು ತಲುಪಿ 98 ಸಾವಿರ ಪ್ರಕರಣಗಳು ಒಂದೇ ದಿನ ದಾಖಲಾಗಿದ್ದವು.
ಸತತ ಎರಡನೇ ದಿನ 200ಕ್ಕಿಂತ ಹೆಚ್ಚು ಮಂದಿ ಸೋಂಕಿತರು ಬಲಿಯಾಗಿದ್ದು, ಬುಧವಾರ ವೈರಸ್ನಿಂದ 248 ಮಂದಿ ಮೃತಪಟ್ಟಿದ್ದಾರೆ. ಕಳೆದ ಆರು ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಮಂಗಳವಾರ ದಾಖಲಾದ 47,281 ಪ್ರಕರಣಗಳಿಗೆ ಹೋಲಿಸಿದರೆ ಬುಧವಾರ 6000ದಷ್ಟು ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲೇ 31855 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.5 ಲಕ್ಷದ ಸನಿಹಕ್ಕೆ ಬಂದಿದೆ.
ಗುಜರಾತ್ನಲ್ಲೂ ಬುಧವಾರ 1790 ಪ್ರಕರಣಗಳು ದಾಖಲಾಗಿದ್ದು, ಇದುವರೆಗಿನ ಗರಿಷ್ಠ ಸಂಖ್ಯೆ ಇದಾಗಿದೆ. ಈ ಎರಡು ರಾಜ್ಯಗಳನ್ನು ಹೊರತುಪಡಿಸಿ 19 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷದ ಗರಿಷ್ಠ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ.
0 التعليقات: