Sunday, 28 March 2021

ಮಾ.29ರಂದು ಸಿಡಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರು: ವಕೀಲ ಜಗದೀಶ್

 

ಮಾ.29ರಂದು ಸಿಡಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರು: ವಕೀಲ ಜಗದೀಶ್

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿಯವರಿಗೆ ಸಂಬಂಧಿಸಿದ್ದೆನ್ನಲಾದ ಅಶ್ಲೀಲ ಸಿ.ಡಿ.ಯಲ್ಲಿ ಕಾಣಿಸಿಕೊಂಡಿರುವ ಯುವತಿ ಪ್ರಕರಣದ ಕುರಿತು ಹೇಳಿಕೆ ನೀಡಲು ಮಾ.29ರಂದು ನ್ಯಾಯಾಲಯದ ಎದುರು ಹಾಜರಾಗುವ ಸಾಧ್ಯತೆ ಇದೆ ಎಂದು ವಕೀಲ ಕೆ.ಎನ್.ಜಗದೀಶ್ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಹೇಳಿಕೆ ನೀಡಲು (ಸ್ಟೇಟ್‌ಮೆಂಟ್‌ 164) ಸಂತ್ರಸ್ತ ಯುವತಿಯನ್ನು ಮಾ.29(ಸೋಮವಾರ)ರಂದು ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಜಗದೀಶ್ ಇಂದು ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿದ್ದಾರೆ.  

ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ಪ್ರಕರಣ ಮತ್ತು ಸುಲಿಗೆ ಪ್ರಕರಣ ದಾಖಲಾಗಿವೆ. ಎರಡೂ ಪ್ರಕರಣಗಳನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ.) ತನಿಖೆ ನಡೆಸುತ್ತಿದೆ. ಆದರೆ ಇವೆರಡೂ ಗಂಭೀರ ಸ್ವರೂಪದ ದೂರುಗಳಾಗಿದ್ದು, ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸುವ ಬಗ್ಗೆ ಸಂಶಯಗಳಿವೆ ಎಂದು ಜಗದೀಶ್ ಆರೋಪಿಸಿದ್ದಾರೆ.

'ಕೋರ್ಟ್‌ನಲ್ಲಿ ಇನ್‌–ಕ್ಯಾಮೆರಾ ಪ್ರಕ್ರಿಯೆ ನಡೆಯಲಿದ್ದು, ಯುವತಿಯ ಹೇಳಿಕೆಗಳು ದಾಖಲಾಗಲಿವೆ. ಆರೋಪಿ ಮತ್ತು ಸಂತ್ರಸ್ತೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ' ಎಂದು ಜಗದೀಶ್‌ ಅವರೊಂದಿಗೆ ಫೇಸ್‌ಬುಕ್‌ ಸಂವಾದದಲ್ಲಿದ್ದ ಮಂಜುನಾಥ್ ಎಂಬುವವರು ತಿಳಿಸಿದ್ದಾರೆ.

ಯುವತಿ ಕೈಬರಹದಲ್ಲಿ ನೀಡಿದ್ದ ದೂರಿನ ಪ್ರತಿಯನ್ನು ಆಕೆಯ ಪರ ವಕೀಲರಾಗಿರುವ ಕೆ.ಎನ್.ಜಗದೀಶ್ ಶುಕ್ರವಾರ ಪೊಲೀಸ್‌ ಆಯುಕ್ತರಿಗೆ ತಲುಪಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಐಪಿಸಿ ಸೆಕ್ಷನ್ 376 ಸಿ (ಪ್ರಭಾವಿ ಹುದ್ದೆಯಲ್ಲಿದ್ದು, ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ), 417(ವಂಚನೆ) ಅಡಿ ಪ್ರಕರಣ ದಾಖಲಾಗಿದೆ. ಜತೆಗೆ, ವೀಡಿಯೊ ಹರಿಬಿಟ್ಟಿರುವ ಆರೋಪದ ಮೇಲೂ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ.

ದೂರು ನೀಡಿದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಾಗಿದೆ.


SHARE THIS

Author:

0 التعليقات: