Wednesday, 10 March 2021

ಬ್ರೇಕ್ ಫೇಲ್ಯೂರ್ ಆಗಿ ಕಂದಕಕ್ಕೆ ಉರುಳಿದ ಬಸ್, 26 ಮಂದಿ ಸಾವು..!

 

ಬ್ರೇಕ್ ಫೇಲ್ಯೂರ್ ಆಗಿ ಕಂದಕಕ್ಕೆ ಉರುಳಿದ ಬಸ್, 26 ಮಂದಿ ಸಾವು..!

ಜಕಾರ್ತಾ: ಬೇಕ್ ವೈಫಲ್ಯವಾಗಿ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ ಬಿದ್ದು 26 ಮಂದಿ ಪ್ರಯಾಣಿಕರು ಮೃತಪಟ್ಟು , 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಇಂಡೋನೇಷಿಯಾದಲ್ಲಿ ಸಂಭವಿಸಿದೆ. ಇಸ್ಲಾಮಿಕ್ ಜೂನಿಯರ್ ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಜಾವಾದ ದ್ವೀಪ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಬ್ರೇಕ್ ಫೇಲ್ಯೂರ್ ಆಗಿ ಈ ದುರ್ಘಟನೆ ಸಂಭವಿಸಿದೆ.

ಪೂರ್ವಾ ಜಾವಾದ ಸುಬಾಂಗ್ ಪಟ್ಟಣದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ತಸಿಕ್ ಮುಲಾಯಾ ಪ್ರದೇಶದಲ್ಲಿರುವ ಧಾರ್ಮಿಕ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ 26 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಕೊ ರಸೆಟಿಯೋ ರೊಬ್ಯಾಂಟೋ ತಿಳಿಸಿದ್ದಾರೆ.

ಇಕ್ಕಟ್ಟಾದ ಇಳಿಜಾರು ಪ್ರದೇಶದ ತಿರುವಿನಲ್ಲಿ ಬಸ್‍ನ ಬ್ರೇಕ್ ವೈಫಲ್ಯಗೊಂಡಿದ್ದು , ಚಾಲಕನಿಗೆ ಬಸ್ ನಿಯಂತ್ರಣ ಸಿಗದ ಹಿನ್ನೆಲೆಯಲ್ಲಿ 20 ಅಡಿ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಸಿಲುಕಿಕೊಂಡಿದ್ದ 26 ಮೃತದೇಹಗಳನ್ನು ಹೊರ ತೆಗೆಯುವಲ್ಲಿ ರಕ್ಷಣಾ ಕಾರ್ಯಪಡೆಗಳು ಯಶಸ್ವಿಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ 35 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉರುಳಿ ಬಿದ್ದ ಬಸ್‍ನ ಅವಶೇಷಗಳಡಿ ಓರ್ವ ವ್ಯಕ್ತಿ ಸಿಲುಕಿಕೊಂಡಿದ್ದು, ಆತನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡಿರುವ 35 ಮಂದಿಯಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಅಪಘಾತಕ್ಕೆ ಕಾರಣಕರ್ತನಾದ ಚಾಲಕನು ದುರಂತದಲ್ಲಿ ಬಲಿಯಾಗಿದ್ದಾನೆ.

2018ರಲ್ಲಿ ಪ್ರವಾಸಿ ಬಸ್‍ವೊಂದು ಕಂದಕಕ್ಕೆ ಉರುಳಿ 27 ಮಂದಿ ಮೃತಪಟ್ಟಿದ್ದರು. ಅದೇ ರೀತಿ 2019ರಲ್ಲಿ 80 ಅಡಿ ಕಂದಕಕ್ಕೆ ಪ್ಯಾಸೆಂಜರ್ ಬಸ್ ಉರುಳಿ ಬಿದ್ದು 35 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಇದೀಗ ಇಂಡೋನೇಷಿಯಾದಲ್ಲಿ ಮತ್ತೊಂದು ಬಸ್ ದುರಂತ ಸಂಭವಿಸಿ 26 ಅಮಾಯಕ ಜೀವಗಳು ಬಲಿಯಾಗಿವೆ.


SHARE THIS

Author:

0 التعليقات: