Wednesday, 24 February 2021

ಸಾರಿಗೆ ನೌಕರರ ಮುಷ್ಕರ : ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

 

ಸಾರಿಗೆ ನೌಕರರ ಮುಷ್ಕರ : ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : 2020ರ ಡಿ.11 ಮತ್ತು 12ರಂದು ನಡೆದ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಗೆ ಸಾರಿಗೆ ನೌಕರರ ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ಆಯೋಜಕರಿಂದಲೇ ವಸೂಲಿ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಸಮರ್ಪಣಾ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತ, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ಜಿ.ಆರ್. ಮೋಹನ್ ಅವರು ವಾದಿಸಿದರು.

ಅರ್ಜಿಯಲ್ಲಿ ಏನಿದೆ: ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘಗಳು ಆಗಾಗ್ಗೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡುತ್ತಿರುತ್ತವೆ. ಅದನ್ನು ನಿಯಂತ್ರಿಸಲು ಸರಕಾರ ಎಸ್ಮಾ ಕಾಯ್ದೆಯನ್ನೂ ಜಾರಿಗೆ ತಂದಿದೆ. ಹೀಗಿದ್ದರೂ ಡಿಸೆಂಬರ್ ನಲ್ಲಿ   ಕೆಎಸ್ಸಾರ್ಟಿಸಿ  ಮತ್ತು ಬಿಎಂಟಿಸಿ ನೌಕರರು ಏಕಾಏಕಿ ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದ್ದಲ್ಲದೇ,       ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಗೆ 7.93 ಕೋಟಿ ರೂ. ನಷ್ಟ ಉಂಟಾಗಿದೆ. ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಆದರೆ, ಅವುಗಳನ್ನು ಆಧರಿಸಿ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಹೀಗಾಗಿ, ಮುಷ್ಕರದಿಂದ ಉಂಟಾಗಿರುವ ನಷ್ಟ 7.93 ಕೋಟಿ ರೂಪಾಯಿಯನ್ನು ಮಷ್ಕರಕ್ಕೆ ಕರೆ ನೀಡಿದ್ದ ಸಂಘಟನೆಗಳು ಮತ್ತು ನೌಕರರಿಂದ ವಸೂಲಿ ಮಾಡಬೇಕು. ಮುಷ್ಕರ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸರಕಾರ ಮತ್ತು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


SHARE THIS

Author:

0 التعليقات: