ನವದೆಹಲಿ: ಗಮನಾರ್ಹ ಬೆಳವಣಿಗೆಯೊಂದರಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್ಗಳ ಬಳಿ ರಸ್ತೆಯಲ್ಲಿ ಸ್ಥಾಪಿಸಲಾದ ಮೊಳೆಗಳನ್ನು ಪೊಲೀಸರು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಈ ಸಂಬಂಧ ತಾಜಾ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.
ಜನವರಿ 26 ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪೆರೇಡ್ನಲ್ಲಿ ಹಿಂಸಾಚಾರ ಘಟಿಸಿರುವ ಹಿನ್ನೆಲೆಯಲ್ಲಿ ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಸೇರಿದಂತೆ ದೆಹಲಿ-ಹರಿಯಾಣದ ಟಿಕ್ರಿ ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ಬಳಿ ರಸ್ತೆಗಳಲ್ಲಿ ಮೊಳೆಗಳನ್ನು ಲಗತ್ತಿಸಲಾಗಿತ್ತು.
ರೈತರ ಸಂಚಾರವನ್ನು ತಡೆಯುವ ನಿಟ್ಟಿನಲ್ಲಿ ಬೃಹತ್ ಬ್ಯಾರಿಕೇಡ್, ಮುಳ್ಳುಗಳ ತಂತಿ ಹಾಗೂ ಸಿಮೆಂಟ್ ಬ್ಯಾರಿಕೇಡ್ಗಳನ್ನು ರಸ್ತೆಗಳಲ್ಲಿ ಸ್ಥಾಪಿಸಲಾಗಿತ್ತು. ಸರ್ಕಾರದ ಈ ಕ್ರಮವು ವಿರೋಧ ಪಕ್ಷದಿಂದ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ನಡುವೆ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸ್ಥಿತಿಗತಿಯನ್ನು ವಿಚಾರಿಸಲು ತೆರಳಿದ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ಗಾಜಿಪುರ ಗಡಿಯಲ್ಲಿ ತಡೆದರು.
ಎಸ್ಎಡಿ, ಡಿಎಂಕೆ, ಎನ್ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ಪಕ್ಷಗಳ 15 ಸಂಸದರು ರೈತರನ್ನು ಭೇಟಿಯಾಗಲು ಗಾಜಿಪುರ ಗಡಿಯನ್ನು ತಲುಪಿದರು.
ನೀರು, ವಿದ್ಯುತ್, ಇಂಟರ್ನೆಟ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿರುವುದನ್ನು ಖಂಡಿಸಿರುವ ಸಂಸದರು, ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
0 التعليقات: