Wednesday, 17 February 2021

ರೈತರ ಪ್ರತಿಭಟನೆ: ಭಾರತ ಸರಕಾರದ ಕ್ರಮ ಖಂಡಿಸುವಂತೆ ಬೈಡೆನ್‌ಗೆ ಪತ್ರ ಬರೆದ ಅಮೆರಿಕದ ವಕೀಲರು

 

ರೈತರ ಪ್ರತಿಭಟನೆ: ಭಾರತ ಸರಕಾರದ ಕ್ರಮ ಖಂಡಿಸುವಂತೆ ಬೈಡೆನ್‌ಗೆ ಪತ್ರ ಬರೆದ ಅಮೆರಿಕದ ವಕೀಲರು

ಹೊಸದಿಲ್ಲಿ: ಅಮೆರಿಕಾದ 40ಕ್ಕೂ ಅಧಿಕ ದಕ್ಷಿಣ ಏಷ್ಯಾ ಮೂಲದ ನಾಗರಿಕ ಮತ್ತು ಮಾನವ ಹಕ್ಕು ವಕೀಲರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಇತರ ಗಣ್ಯ ಅಮೆರಿಕನ್ ನಾಯಕರಿಗೆ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತು ಪತ್ರ ಬರೆದು ಭಾರತದ ನರೇಂದ್ರ ಮೋದಿ ನೇತೃತ್ವದ ಸರಕಾರವು ರೈತರ ಶಾಂತಿಯುತ ಪ್ರತಿಭಟನೆಯನ್ನು ``ಹಿಂಸೆ, ಅಕ್ರಮ ಬಂಧನ ಹಾಗೂ ಸೆನ್ಸಾರ್‌ಶಿಪ್'' ಮೂಲಕ ಹತ್ತಿಕ್ಕುತ್ತಿರುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಸರಕಾರದ ಈ ಕೃತ್ಯಗಳನ್ನು ಅಮೆರಿಕ ಖಂಡಿಸಿ ಪ್ರತಿಭಟನಾಕಾರರ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು ಎಂದು  ಭಾರತಕ್ಕೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಬಂಧಿತರ ಜತೆ ಯಾವುದೇ ಚರ್ಚೆಯಿಲ್ಲದೆ, ಸಂಸತ್ತಿನಲ್ಲೂ ಸೂಕ್ತ ಚರ್ಚೆಗೆ ಅವಕಾಶ ನೀಡದೆ ಕೋವಿಡ್ ಸಾಂಕ್ರಾಮಿಕದ ಸಂದರ್ಭ ಈ ಮಸೂದೆಗಳನ್ನು ಅಂಗೀಕರಿಸಿ ಜಾರಿಗೊಳಿಸಲಾಗಿದ್ದು, ಈ ಅಪ್ರಜಾಸತ್ತಾತ್ಮಕ ಪ್ರಕ್ರಿಯೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದು ಇದು ಭಾರತದ ಇತ್ತೀಚಿಗಿನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮಟ್ಟದ ಆಂದೋಲನ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇಂಟರ್ನೆಟ್ ಸ್ಥಗಿತ, ಕೃಷಿ ಕಾನೂನುಗಳ ವಿರುದ್ಧ ಮಾತನಾಡುವವರ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವುದು, ಪೊಲೀಸ್ ಹಿಂಸೆ, ಹೋರಾಟಗಾರರ ಬಂಧನ ಕುರಿತು ಮಾತನಾಡುವ ಪತ್ರಕರ್ತರು ಹಾಗೂ ಹೋರಾಟಗಾರರ ವಿರುದ್ಧ ಕ್ರಮ ಹಾಗೂ ಯುಎಪಿಎ ಅನ್ವಯ ಬಂಧನದ ಕುರಿತೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಿಎಎ ವಿರೋಧಿ ಪ್ರತಿಭಟನೆಗಳನ್ನೂ ಉಲ್ಲೇಖಿಸಿದ ಪತ್ರ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳೂ ಅಪಾಯದಲ್ಲಿವೆ ಎಂದು ಬರೆದಿದೆ.

ಭಾರತ ಸರಕಾರದ ಕ್ರಮವನ್ನು ಖಂಡಿಸಬೇಕು ಎಂದು ಬೈಡೆನ್ ಅವರಿಗೆ ಪತ್ರದಲ್ಲಿ ಸಲಹೆ ನೀಡಲಾಗಿದೆ ಹಾಗೂ ಈ ವಿಚಾರವನ್ನು ವಿಶ್ವ ಸಂಸ್ಥೆಯಲ್ಲೂ ಪ್ರಸ್ತಾಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳು ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕುಗಳ ಉಲ್ಲಂಘನೆಯಲ್ಲದೆ ಮೂಲಭೂತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳು, ಜೀವಿಸುವ ಹಕ್ಕು, ಶಾಂತಿಯುತ ಪ್ರತಿಭಟನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಹತ್ತಿಕ್ಕಿದೆ,'' ಎಂದು ಪತ್ರದಲ್ಲಿ ಬರೆಯಲಾಗಿದೆ.


SHARE THIS

Author:

0 التعليقات: