Sunday, 28 February 2021

ಕಾಂಗ್ರೆಸ್ ನಲ್ಲಿ ಮುಂದುವರೆದ ನಾಯಕತ್ವ ಗೊಂದಲ ಮತ್ತು ಗುಂಪುಗಾರಿಕೆ

 

ಕಾಂಗ್ರೆಸ್ ನಲ್ಲಿ ಮುಂದುವರೆದ ನಾಯಕತ್ವ ಗೊಂದಲ ಮತ್ತು ಗುಂಪುಗಾರಿಕೆ

ಬೆಂಗಳೂರು,ಫೆ.28- ಕಾಂಗ್ರೆಸ್‍ನಲ್ಲಿ ಒಂದೆಡೆ ಸಾಮೂಹಿಕ ನಾಯಕತ್ವದ ಮಂತ್ರ ಪಠಣವಾಗುತ್ತಿದ್ದರೆ, ಮತ್ತೊಂದೆಡೆ ನಾಯಕರ ವೈಯಕ್ತಿಕ ವರ್ಚಸ್ಸು ಮತ್ತು ಬೆಂಬಲಿಗರ ಹಿತರಕ್ಷಣೆಗಾಗಿ ಗೊಂದಲಗಳ ಮೇಲೆ ಗೊಂದಲ ಸೃಷ್ಟಿಯಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಸಂದರ್ಭದಲ್ಲಿ ನಡೆದ ಘಟನಾವಳಿಗಳು ಕಾಂಗ್ರೆಸ್‍ನಲ್ಲಿನ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‍ನ ಅಗ್ರಗಣ್ಯ ನಾಯಕ.

ಹೆಚ್ಚು ಜನಪ್ರಿಯ ಮತ್ತು ವರ್ಚಿಸಿನ ನಾಯಕ. ಅವರ ಸಾಮಾಜಿಕ ಭದ್ರತೆ, ಆಡಳಿತಾತ್ಮಕ ಅನುಭವದ ವಿಷಯಗಳಲ್ಲಿ ಯಾವುದೇ ಚಕಾರವಿಲ್ಲ. ಆದರೆ ಪಕ್ಷದಲ್ಲಿ ಹಿಡಿತ ಸಾಸಲು ಕಾಲಕಾಲಕ್ಕೆ ಅನುಸರಿಸುತ್ತಿರುವ ತಂತ್ರಗಾರಿಕೆಗಳು ಸಾಕಷ್ಟು ವಿರೋಧಗಳಿಗೆ ಕಾರಣವಾಗಿದೆ. ಗುಂಪುಗಾರಿಕೆಯನ್ನು ಹುಟ್ಟುಹಾಕಿದೆ.

ಕಾಂಗ್ರೆಸ್ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದ ಬಳಿಕ ಪ್ರತಿ ಪಕ್ಷದ ನಾಯಕನ ಸ್ಥಾನ ಬೇಕೆಂದು ಹಠಕ್ಕೆ ಬಿದ್ದರು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಂಡ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿತು.

ಸಿದ್ದರಾಮಯ್ಯ ಅವರ ಜೊತೆ ಆತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಅವರೊಂದಿಗೆ ಕಾಂಗ್ರೆಸ್‍ಗೆ ಬಂದ ಬಹಳಷ್ಟು ನಾಯಕರು ಈಗ ಗೊಂದಲದಲ್ಲಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ರಿಜ್ವಾನ್ ಹರ್ಷದ್ ಅವರಿಗೆ ಮಣೆ ಹಾಕಿದ ಬಳಿಕ ಕಾಂಗ್ರೆಸ್ ಅಲ್ಪಸಂಖ್ಯಾತರ ಹಿರಿಯ ನಾಯಕ ಜಾಫರ್ ಶರೀಫ್ ಅಸಮಾಧಾನಗೊಂಡಿದ್ದರು. ಅವರ ಕೊನೆಯ ದಿನಗಳವರೆಗೂ ಸಿದ್ದರಾಮಯ್ಯನವರೊಂದಿಗಿನ ಅಸಮಾಧಾನವೇ ಉಳಿದುಹೋಯಿತು.

ಬಳಿಕ ಸಿದ್ದರಾಮಯ್ಯನವರ ಭುಜಬಲಗಳು ಎಂದು ಹೇಳಲಾದ ಸತೀಶ್ ಜಾರಕಿಹೊಳಿ, ಸಿ.ಎಂ.ಇಬ್ರಾಹಿಂ ಕೂಡ ಹಂತ ಹಂತವಾಗಿ ದೂರವಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಮಣೆ ಹಾಕಿದ್ದರಿಂದಾಗಿ ಸತೀಶ್ ಜಾರಕಿಹೊಳಿ ದೂರವಾಗಿದ್ದರು. ಕೊನೆಗೆ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರವನ್ನೇ ಪತನ ಮಾಡುವ ಮಟ್ಟಿಗೆ ರಾಜಕೀಯ ಮಾಡಿದರು.

ಈಗ ಜಮೀರ್ ಅಹಮ್ಮದ್ ಖಾನ್ ಅವರಿಗೆ ಹೆಚ್ಚು ಮಣೆ ಹಾಕುತ್ತಿರುವುದರಿಂದಾಗಿ ಸಿ.ಎಂ.ಇಬ್ರಾಹಿಂ, ರೋಷನ್ ಬೇಗ್ ಸೇರಿದಂತೆ ಅನೇಕ ನಾಯಕರು ರೊಚ್ಚಿಗೆದ್ದಿದ್ದಾರೆ. ಐಎಂಎ ಹಗರಣದಲ್ಲಿ ಕಾಂಗ್ರೆಸ್‍ನ ಕೆಲವು ನಾಯಕರ ಹೆಸರು ಕೇಳಿಬಂದ ಬಳಿಕ ಪಕ್ಷದ ಒಳಗೆ ಒಂದಿಷ್ಟು ಚರ್ಚೆಗಳಾದವು. ಹಿರಿಯ ನಾಯಕರು ಹಗರಣದಲ್ಲಿ ಹೆಸರಿಸಲಾದ ನಾಯಕರ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಬಾರದು ಎಂಬ ಫರ್ಮಾನು ಕೂಡ ಹೊರಡಿಸಲಾಯಿತು. ಆದರೆ ಸಿದ್ದರಾಮಯ್ಯ ಅದಾವುದಕ್ಕೂ ಸೊಪ್ಪು ಹಾಕಿಲ್ಲ.

ಮೈಸೂರು ಮೇಯರ್ ಚುನಾವಣೆ ಸಂಬಂಧಪಟ್ಟಂತೆ ಚರ್ಚೆಗೆ ಸಿದ್ದರಾಮಯ್ಯ ಸಿ.ಎಂ.ಇಬ್ರಾಹಿಂ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಆವರೆಗೂ ಹತೋಟಿಯಲ್ಲಿದ್ದ ಜಿಲ್ಲಾ ರಾಜಕಾರಣ, ಏಕಾಏಕಿ ಬದಲಾಗಿದೆ. ಬಾದಾಮಿ ಕ್ಷೇತ್ರದಿಂದ ಚುನಾಯಿತರಾಗಿರುವ ಸಿದ್ದರಾಮಯ್ಯನವರು ಮತ್ತೆ ಮೈಸೂರು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂಬಷ್ಟರ ಮಟ್ಟಿಗೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರು ಇದನ್ನು ಆಕ್ಷೇಪಿಸಿದ್ದಾರೆ.

ಸಿದ್ದರಾಮಯ್ಯ ಜಮೀರ್ ಅಹಮ್ಮದ್‍ಖಾನ್ ಅವರಿಗೆ ಮಣೆ ಹಾಕುತ್ತಿದ್ದಾರೆ ಎಂಬ ಕಾರಣಕ್ಕಾಗಿ ತನ್ವೀರ್ ಸೇಠ್ ಸಿಟ್ಟಾಗಿದ್ದು, ಸ್ಥಳೀಯ ಪಾಲಿಕೆ ಸದಸ್ಯರ ಅಭಿಪ್ರಾಯಕ್ಕೆ ಬೆಂಬಲ ನೀಡಿದ್ದಾರೆ.ಈಗ ಇದು ಪಕ್ಷದಲ್ಲಿ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿದೆ. ಮೈಸೂರು ಪಾಲಿಕೆಯ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್ ವಿರುದ್ದ ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಅನಗತ್ಯವಾಗಿ ಸಣ್ಣ ವಿವಾದ ದೊಡ್ಡದಾಗುತ್ತಿದ್ದು, ಮತ್ತೊಮ್ಮೆ ಇಲ್ಲಿ ನಾಯಕತ್ವದ ಜಟಾಪಟಿ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿವಾದವನ್ನು ತಿಳಿಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಸಿದ್ದರಾಮಯ್ಯನವರ ಬೆಂಬಲಿಗರು ಉದ್ದೇಶಪೂರ್ವಕವಾಗಿ ಕೆದಕಿ ದೊಡ್ಡದು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತನ್ವೀರ್ ಸೇಠ್ ಅವರ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕೆ ಒತ್ತಡಗಳ ಮೇಲೆ ಒತ್ತಡಗಳು ಬರುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಳೆ ತನ್ವೀರ್ ಸೇಠ್ ಅವರನ್ನು ಕರೆಸಿಕೊಳ್ಳುತ್ತಿದ್ದು, ಮಾತುಕತೆಯ ಮೂಲಕ ಯಾವ ನಿರ್ಧಾರ ಹೊರಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಅಣತಿಯಂತೆ ನಡೆದುಕೊಂಡಿದ್ದೇನೆ ಎಂದು ತನ್ವೀರ್ ಹೇಳುತ್ತಿದ್ದರಾದರೂ ಒಳಗೊಳಗೆ ಸ್ಥಳೀಯ ನಾಯಕರು ತಮ್ಮ ಆಂತರಿಕ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.


SHARE THIS

Author:

0 التعليقات: