ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಮರದಲ್ಲೇ ನೇತಾಡುತ್ತಿತ್ತು! ಬೆಚ್ಚಿಬಿದ್ದ ಸ್ಥಳೀಯರು
ಕಲಬುರಗಿ: ಯಡ್ರಾಮಿ ಪಟ್ಟಣ ಹೊರವಲಯದ ಹಳ್ಳದ ಮರವೊಂದರಲ್ಲಿ ಯುವಕ ಮತ್ತು ಯುವತಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಾನಶಿವನಗಿ ಗ್ರಾಮದ ಪರಶುರಾಮ ಪೂಜಾರಿ(23) ಮತ್ತು ಭಾಗ್ಯಶ್ರೀ(19) ಮೃತ ದುರ್ದೈವಿಗಳು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೂ ಪ್ರೇಮಿಗಳು ಸಾವಿನ ಮನೆಯ ಕದ ತಟ್ಟಿದ್ದೇಕೆ?
ಫೆ.11ರಂದು ಪರಶುರಾಮ ಪೂಜಾರಿ ಮತ್ತು ಭಾಗ್ಯಶ್ರೀ ನಾಪತ್ತೆಯಾಗಿದ್ದರು. ನಿನ್ನೆ(ಫೆ.15) ಸಂಜೆ ಯಡ್ರಾಮಿ ಪಟ್ಟಣ ಹೊರವಲಯದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ.
ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗ. ಮನೆಯ ಹಿರಿಯರು ಚರ್ಚಿಸಿ, ಆದಷ್ಟು ಬೇಗ ನಿಶ್ಚಿತಾರ್ಥ ಮಾಡುತ್ತೇವೆ. ಮದುವೆಯನ್ನ ಸ್ವಲ್ಪ ತಡವಾಗಿ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು. ಆದರೆ, ಮದುವೆ ತಡ ಮಾಡುವ ನೆಪದಲ್ಲಿ ನಮ್ಮಿಬ್ಬರನ್ನೂ ದೂರ ಮಾಡುವ ಉದ್ದೇಶ ಅಡಗಿದೆ ಎಂದು ಅನುಮಾನಗೊಂಡ ಪ್ರೇಮಿಗಳಿಬ್ಬರು ಫೆ.11ರಂದು ಮನೆ ಬಿಟ್ಟು ಹೋಗಿದ್ದರು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಬೇಸರಗೊಂಡ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮತ್ತು ತನಿಖೆ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 التعليقات: