ಉತ್ತರಾಖಂಡ ಹಿಮಸ್ಫೋಟ: ಪ್ರಧಾನಿ ಮೋದಿ ಪರಿಸ್ಥಿತಿ ಅವಲೋಕನ, ಎನ್ ಡಿಆರ್ ಎಫ್ ತಂಡ ರವಾನಿಸಿದ್ದೇವೆ ಎಂದ ಅಮಿತ್ ಶಾ
ಡೆಹ್ರಾಡೂನ್: ಉತ್ತರಖಂಡದಲ್ಲಿ ಸಂಭವಿಸಿರುವ ಹಿಮಸ್ಫೋಟದಿಂದಾಗಿ ಉಂಟಾಗಿರುವ ಭಾರಿ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿ ಅವಲೋಕಿಸುತ್ತಿದ್ದು, ಉತ್ತರಾಖಂಡಕ್ಕೆ ಹೆಚ್ಚುವರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ರವಾನೆ ಮಾಡಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿ ಹಿಮನದಿ ಉಕ್ಕಿ ಹರಿದಿದ್ದು, ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸೇರಿದಂತೆ ಜಿಲ್ಲಾಡಳಿತವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಇನ್ನು ಹಿಮಪಾತ ಉಂಟಾಗಿರುವ ಹಿನ್ನೆಲೆಯಲ್ಲಿ ಕಣಿವೆ ಪ್ರದೇಶದ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ರೆನಿ ಗ್ರಾಮದ ಸಮೀಪ ಧೌಲಿಗಂಗಾ ಹಾಗೂ ಜೋಶಿಮಠ ಪ್ರದೇಶದಲ್ಲಿ ವ್ಯಾಪಕ ಪ್ರವಾಹದ ಸ್ಥಿತಿ ಉಂಟಾಗಿದೆ. ಪರಿಣಾಮ ಇಲ್ಲಿ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡಕ್ಕೆ ಹೆಚ್ಚುವರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ರವಾನೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ಐಟಿಬಿಪಿಯ ಎರಡು ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಎನ್ಡಿಆರ್ಎಫ್ನ ಮೂರು ತಂಡಗಳು ಡೆಹ್ರಾಡೂನ್ನಿಂದ ತೆರಳಿದೆ. ಹೆಚ್ಚುವರಿ ಮೂರು ತಂಡಗಳು ವಾಯುಪಡೆಯ ಹೆಲಿಕಾಪ್ಟರ್ನೊಂದಿಗೆ ಸಂಜೆಯ ವೇಳೆಗೆ ತಲುಪಲಿದೆ. ಎಸ್ಡಿಆರ್ಎಫ್ ಹಾಗೂ ಸ್ಥಳೀಯ ಆಡಳಿತ ಈಗಾಗಲೇ ಪ್ರದೇಶದಲ್ಲಿದ್ದು ಕಾರ್ಯಾಚರಣೆಯಲ್ಲಿ ತೊಡಗಿವೆ. ತಕ್ಷಣ ಪರಿಹಾರ ಕಾರ್ಯಾಚರಣೆಗೆ ನೆರವಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ವಾಯುಪಡೆ ಹಾಗೂ ಎನ್ಡಿಆರ್ಎಫ್ ಪಡೆಗಳನ್ನು ರವಾನಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
0 التعليقات: