Tuesday, 2 February 2021

ದಿಲ್ಲಿ ಗಲಭೆ ವೇಳೆ ಗಾಯಾಳುಗಳಿಂದ ಬಲವಂತವಾಗಿ ರಾಷ್ಟ್ರಗೀತೆ ಹಾಡಿಸಿದ ಪ್ರಕರಣ: ಇನ್ನೂ ಪತ್ತೆಯಾಗದ ಪೊಲೀಸರು!

 

ದಿಲ್ಲಿ ಗಲಭೆ ವೇಳೆ ಗಾಯಾಳುಗಳಿಂದ ಬಲವಂತವಾಗಿ ರಾಷ್ಟ್ರಗೀತೆ ಹಾಡಿಸಿದ ಪ್ರಕರಣ: ಇನ್ನೂ ಪತ್ತೆಯಾಗದ ಪೊಲೀಸರು!

ಹೊಸದಿಲ್ಲಿ,ಫೆ.02: ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗಳ ಸಂದರ್ಭ  ಪೊಲೀಸ್ ಸಿಬ್ಬಂದಿ ಕೆಲ ಗಾಯಾಳು ವ್ಯಕ್ತಿಗಳು ರಸ್ತೆಯಲ್ಲಿ ಬಿದ್ದುಕೊಂಡಿರುವಂತೆಯೇ ಅವರನ್ನು ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡಲು ಬಲವವಂತಪಡಿಸಿದ  ವೀಡಿಯೋ ಸಾಕಷ್ಟು  ಚರ್ಚೆಗೆ  ಗ್ರಾಸವಾಗಿ ವಿವಾದಕ್ಕೀಡಾಗಿದ್ದರೂ ಈ ವೀಡಿಯೋದಲ್ಲಿ ಕಾಣಿಸಿಕೊಂಡ ಪೊಲೀಸ್ ಸಿಬ್ಬಂದಿಯನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದು ದಿಲ್ಲಿ ಪೊಲೀಸರು ಹೈಕೋರ್ಟ್‍ಗೆ ಹೇಳಿದ್ದಾರೆ. ಈ ವೀಡಿಯೋದಲ್ಲಿ  ಗಾಯಾಳುವಾಗಿ ರಸ್ತೆಯಲ್ಲಿ ಬಿದ್ದಿದ್ದ ಹಲವರಲ್ಲಿ ಒಬ್ಬನಾಗಿದ್ದ 23 ವರ್ಷದ ಫೈಝಾನ್ ನಂತರ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಈತನ ತಾಯಿ ಕಿಸ್ಮತುನ್ ಪ್ರಕರಣದ ಎಸ್‍ಐಟಿ ತನಿಖೆಗೆ ಆಗ್ರಹಿಸಿ  ದಿಲ್ಲಿ ಹೈಕೋರ್ಟ್‍ಗೆ ಅಪೀಲು ಸಲ್ಲಿಸಿದ್ದು ಅದರ ವಿಚಾರಣೆ ವೇಳೆ ಪೊಲೀಸರು ಮೇಲಿನಂತೆ ಹೇಳಿದ್ದಾರೆ.

ಆ ಘಟನೆಯ ನಾಲ್ಕು ವೀಡಿಯೋ ತುಣುಕುಗಳಲ್ಲಿ ಆರೋಪಿ ಪೊಲೀಸರ ಮುಖಗಳು ಮಸುಕಾಗಿವೆ ಹಾಗೂ ಸರಿಯಾಗಿ ಕಾಣಿಸುತ್ತಿಲ್ಲ ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದ ಆರೋಪಿ ಪೊಲೀಸರನ್ನು ಅವರ ಹೆಲ್ಮೆಟ್  ಸಂಖ್ಯೆ ಹಾಗೂ ಸಮವಸ್ತ್ರದಲ್ಲಿನ ಬ್ಯಾಡ್ಜ್ ಮುಖಾಂತರ  ಪತ್ತೆ ಹಚ್ಚಲು ಪ್ರಾಮಾಣಿಕ ಯತ್ನ ನಡೆಸಿದ್ದಾಗಿ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಎಲ್ಲೆಡೆ ಉದ್ವಿಗ್ನತೆಯ ವಾತಾವರಣವಿದ್ದುದರಿಂದ ಫೈಝಾನ್ ಮತ್ತಿತರರನ್ನು ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ಅವರಿಚ್ಛೆಯಂತೆಯೇ ಇರಿಸಲಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

ದಿಲ್ಲಿ ಪೊಲೀಸರ ಅಸ್ಪಷ್ಟ ಉತ್ತರಕ್ಕೆ ಜಸ್ಟಿಸ್ ಯೋಗೇಶ್ ಖನ್ನಾ ಅವರ ನೇತೃತ್ವದ ಪೀಠ ಅವರನ್ನು ತರಾಟೆಗೆ ತೆಗೆದುಕೊಂಡಿತಲ್ಲದೆ ಆ ಸಂದರ್ಭ ಜ್ಯೋತಿನಗರ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದವೇ ಅಥವಾ ಇಲ್ಲವೇ ಎಂಬ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ್ದಾರೆ.



SHARE THIS

Author:

0 التعليقات: