Monday, 8 February 2021

ರಫೇಲ್ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಮಾತ್ರ ಖರ್ಚಾದ ಮೊತ್ತವೆಷ್ಟು ಗೊತ್ತೇ?


ರಫೇಲ್ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಮಾತ್ರ ಖರ್ಚಾದ ಮೊತ್ತವೆಷ್ಟು ಗೊತ್ತೇ?

ಹೊಸದಿಲ್ಲಿ : ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಬಾಲಾ ವಾಯುಪಡೆಯಲ್ಲಿ ನಡೆದ ಐದು ಹೊಸ ರಫೇಲ್‌ ಯುದ್ಧ ವಿಮಾನಗಳನ್ನು ವಾಯುಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ 41 ಲಕ್ಷ ರೂ ಖರ್ಚಾಗಿದ್ದು, ಅದರಲ್ಲಿ  9.18 ರೂ ಲಕ್ಷ ಜಿಎಸ್‌ಟಿಯೂ ಸೇರಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸೋಮವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

‘ಮೊದಲ ಐದು ರಫೇಲ್ ಯುದ್ಧ ವಿಮಾನಗಳನ್ನು ಸೆ.10ರಂದು ಔಪಚಾರಿಕವಾಗಿ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಆ ಕಾರ್ಯಕ್ರಮವನ್ನು ಭಾರತೀಯ ವಾಯುಪಡೆಯ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ 41.32 ಲಕ್ಷ ರೂ ಖರ್ಚಾಗಿತ್ತು.  9.18 ಲಕ್ಷ ಜಿಎಸ್‌ಟಿ ಸೇರಿತ್ತು’ ಎಂದು ಅವರು ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಸಮಾರಂಭದಲ್ಲಿ ಫ್ರಾನ್ಸ್ ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಮತ್ತು ವಿಮಾನದ ತಯಾರಕರಾದ ಫ್ರೆಂಚ್ ಏರೋಸ್ಪೇಸ್ ಪ್ರಮುಖ ಡಸಾಲ್ಟ್ ಏವಿಯೇಷನ್‌ನ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಳೆದ ವರ್ಷದ ಜುಲೈ 29ರಂದು ಮೊದಲ ತಂಡದಲ್ಲಿ ಐದು ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತರಲಾಗಿತ್ತು. ನವೆಂಬರ್ 3ರಂದು ಎರಡನೇ ತಂಡದಲ್ಲಿ ಮೂರು ವಿಮಾನಗಳು ನಂತರ ಈ ವರ್ಷದ ಜನವರಿ 27ರಂದು ಮೂರನೇ ತಂಡದಲ್ಲಿ ಮೂರು ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದವು.

ಭಾರತ – ಫ್ರಾನ್ಸ್ ನಡುವೆ  59 ಸಾವಿರ ಕೋಟಿ ರೂ ಮೊತ್ತದ 36 ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿ ನಾಲ್ಕು ವರ್ಷಗಳ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದೆ.



SHARE THIS

Author:

0 التعليقات: