Sunday, 14 February 2021

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸುಹಾನಾ ನಿಧನ


ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸುಹಾನಾ ನಿಧನ

ಪುತ್ತೂರು, ಫೆ.14: ತ್ರೀವತರದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ತುರ್ತು ಚಿಕಿತ್ಸೆಗಾಗಿ ಪುತ್ತೂರಿನಿಂದ ’ಝೀರೊ ಟ್ರಾಫಿಕ್‌‘ ಮೂಲಕ ಆ್ಯಂಬುಲೆನ್ಸ್ ‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದ ಕಾರಣಕ್ಕೆ ಸುದ್ದಿಯಾಗಿದ್ದ 22ರ ಹರೆಯದ ಸುಹಾನಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೆಹಳ್ಳಿ ನಿವಾಸಿಯಾಗಿದ್ದ ಸುಹಾನಾ ಗಂಭೀರವಾದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಕೆಲ ತಿಂಗಳ ಹಿಂದೆ ಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ಕಳೆದ ವರ್ಷದ ಡಿಸೆಂಬರ್ 2ರಂದು ’ಝೀರೊ ಟ್ರಾಫಿಕ್‌‘ ಮೂಲಕ ಆ್ಯಂಬುಲೆನ್ಸ್ ‌ನಲ್ಲಿ ಪುತ್ತೂರಿನಿಂದ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವರೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಹಾನಾರಿಗೆ ಎರಡು ತಿಂಗಳ ಬಳಿಕ ಶಸ್ತ್ರಚಿಕಿತ್ಸೆಗೆ ವೈದ್ಯರು ಸಿದ್ಧತೆ ನಡೆಸಿದ್ದರು. ಈ ನಡುವೆ ಚಿಕಿತ್ಸೆಗೆ ಸ್ಪಂದಿಸದೆ ಸುಹಾನಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸುಹಾನಾ ದೀರ್ಘಕಾಲದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದರು. ತೀರಾ ಬಡ ಕುಟುಂಬದ ಇವರ ಚಿಕಿತ್ಸೆಗೆ ಲಕ್ಷಾಂತರ ರೂ. ವೆಚ್ಚ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಡಿಸೆಂಬರ್ 2ರಂದು ಸುಹಾನಾರನ್ನು ಆ್ಯಂಬುಲೆನ್ಸ್ ಚಾಲಕ ಉಪ್ಪಿನಂಗಡಿಯ ಹನೀಫ್ 4:20 ಗಂಟೆಯಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ– ಗುರುವಾಯನಕೆರೆ– ಉಜಿರೆ– ಚಾರ್ಮಾಡಿ ಘಾಟಿ ಮೂಲಕ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತಲುಪಿಸಿ, ಅಲ್ಲಿಂದ ಬೇಲೂರು ಮೂಲಕ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆ ತಲುಪಿಸಿದ್ದರು.

ಆ್ಯಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು, ಸ್ಥಳೀಯರು, ಸಂಘ ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿ ’ಝೀರೊ ಟ್ರಾಫಿಕ್‌‘ ವ್ಯವಸ್ಥೆ ಮಾಡಿದ್ದರು.


SHARE THIS

Author:

0 التعليقات: