ಗರಿಷ್ಠ ಸಂಯಮ ಕಾಪಾಡಿ: ಕೇಂದ್ರ, ರೈತರಿಗೆ ಮಾನವಹಕ್ಕು ಸಂಸ್ಥೆ ಮನವಿ
ನ್ಯೂಯಾರ್ಕ್, ಫೆ.6: ಭಾರತ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ನಿರಂತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ಪ್ರತಿಭಟನಾನಿರತ ರೈತರು ಗರಿಷ್ಠ ಸಂಯಮ ಕಾಪಾಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮನವಿ ಮಾಡಿದ್ದಾರೆ.
"ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾನಿರತ ರೈತರು ಗರಿಷ್ಠ ಸಂಯಮ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
"ಶಾಂತಿಯುತವಾಗಿ ಸೇರುವುದು ಹಾಗೂ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅಭಿವ್ಯಕ್ತಿಯ ಹಕ್ಕನ್ನು ಸಂರಕ್ಷಿಸಬೇಕು. ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ಸಮಾನ ಪರಿಹಾರವನ್ನು ಕಂಡುಹಿಡಿಯುವುದು ಅಗತ್ಯ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ರೈತರ ಜತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ವಿಶ್ವಸಂಸ್ಥೆ ಗುರುವಾರ ನರೇಂದ್ರ ಮೋದಿ ಸರಕಾರಕ್ಕೆ ಸೂಚನೆ ನೀಡಿತ್ತು. ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವ ಬಲಗೊಳ್ಳಲು ಅಗತ್ಯ ಎಂದು ಒತ್ತಿ ಹೇಳಿತ್ತು.
ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆಗಳ ಸಾವಿರಾರು ರೈತರು ದಿಲ್ಲಿಯಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು, ಸೆಪ್ಟೆಂಬರ್ನಲ್ಲಿ ಆಂಗೀಕರಿಸಿದ ಕೃಷಿ ಕಾನೂನುಗಳ ರದ್ದತಿಗೆ ಪಟ್ಟು ಹಿಡಿದಿದ್ದಾರೆ. ಬಹುತೇಕ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರೂ, ಜನವರಿ 26ರಂದು ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು.
0 التعليقات: