"ಪಂಜಾಬ್ ಮಾತ್ರವಲ್ಲ ಇಡೀ ದೇಶವೇ ರೈತರೊಂದಿಗೆ ಪ್ರತಿಭಟಿಸುತ್ತಿದೆ, ಸರಕಾರ ಕಡೆಗಣಿಸುತ್ತಿದೆಯಷ್ಟೇ"
ಹೊಸದಿಲ್ಲಿ: ಸಂಸತ್ ಸದಸ್ಯೆ ಮತ್ತು ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮುಖಂಡ ಹರ್ಸಿಮ್ರತ್ ಕೌರ್ ಬಾದಲ್ ಶನಿವಾರ ಮಾತನಾಡಿ, ಕೃಷಿ ಕಾನೂನು ವಿರುದ್ಧ ಪಂಜಾಬ್ ಮಾತ್ರ ಪ್ರತಿಭಟನೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ಇಡೀ ದೇಶವೇ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಪಂಜಾಬ್ ಮಾತ್ರವಲ್ಲದೆ ಇಡೀ ರಾಷ್ಟ್ರವು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದೆ ಎಂಬ ಅಂಶವನ್ನು ಕೇಂದ್ರವು ಕಡೆಗಣಿಸಬೇಕಾದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹರ್ಸಿಮ್ರತ್ ಬಾದಲ್ ಹೇಳಿದರು.
ಹರ್ಸಿಮ್ರತ್ ಕೌರ್ ಬಾದಲ್ ಅವರು 2020 ರ ಸೆಪ್ಟೆಂಬರ್ನಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕೇಂದ್ರ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
"ಭಾರತ ಸರ್ಕಾರವು ಪಂಜಾಬ್ ಮಾತ್ರ ಆಂದೋಲನ ನಡೆಸುತ್ತಿದೆ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದೆ. ಇಡೀ ದೇಶವು ಪ್ರತಿಭಟಿಸುತ್ತಿದೆ, ಎಲ್ಲಾ ರಾಜ್ಯಗಳ ರೈತರು ಪ್ರತಿಭಟನಾ ಸ್ಥಳಗಳಲ್ಲಿ ಕುಳಿತಿದ್ದಾರೆ. ಕೇಂದ್ರ ಸರಕಾರವು ಪಂಜಾಬ್ ಮಾತ್ರ ಪ್ರತಿಭಟಿಸುತ್ತಿದೆ ಎಂದು ಹೇಳಿಕೊಂಡು ಕಣ್ಣುಮುಚ್ಚಿ ಕುಳಿತಿರಬೇಕಾದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಏನು ಬೇಕಾದರೂ ಮಾಡಿ "ಎಂದು ಹರ್ಸಿಮ್ರತ್ ಕೌರ್ ಬಾದಲ್ ಹೇಳಿದರು.
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜನರ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ಹರ್ಸಿಮ್ರತ್ ಕೌರ್ ಬಾದಲ್ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಪಂಜಾಬ್ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
"ದೆಹಲಿಗೆ ಹೋಗಿ ಪಂಜಾಬ್ನ ಮುಗ್ಧ ಯುವಕರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಸಿಎಂ ಅಮರಿಂದರ್ ಸಿಂಗ್ ಅವರ ಜವಾಬ್ದಾರಿಯಾಗಿದೆ. ಯಾವುದೇ ಎಫ್ಐಆರ್ ಇಲ್ಲದೆ ಅವರನ್ನು ಜೈಲಿನಲ್ಲಿರಿಸಲಾಗಿದೆ. ಅವರಿಗೆ ಸಹಾಯ ಮಾಡುವುದು ಪಂಜಾಬ್ ಸರ್ಕಾರದ ಜವಾಬ್ದಾರಿಯಾಗಿದೆ, ಆದರೆ ಅವರು ಏನು ಮಾಡುತ್ತಿದ್ದಾರೆ?" ಎಂದು ಹರ್ಸಿಮ್ರತ್ ಕೌರ್ ಬಾದಲ್ ಪ್ರಶ್ನಿಸಿದ್ದಾರೆ.
0 التعليقات: