Monday, 1 February 2021

ಚುನಾವಣೆಗೆ ಸಿದ್ಧವಾಗಿರುವ ನಾಲ್ಕು ರಾಜ್ಯಗಳಿಗೆ ರಸ್ತೆ, ಮೆಟ್ರೊ ಯೋಜನೆ ಪ್ರಕಟಿಸಿದ ಕೇಂದ್ರ

 

ಚುನಾವಣೆಗೆ ಸಿದ್ಧವಾಗಿರುವ ನಾಲ್ಕು ರಾಜ್ಯಗಳಿಗೆ ರಸ್ತೆ, ಮೆಟ್ರೊ ಯೋಜನೆ ಪ್ರಕಟಿಸಿದ ಕೇಂದ್ರ

ಹೊಸದಿಲ್ಲಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದವಾಗಿರುವ ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪಶ‍್ಚಿಮಬಂಗಾಳ ರಾಜ್ಯಗಳ ರಸ್ತೆ ಹಾಗೂ ಹೆದ್ದಾರಿ ಅಭಿವೃದ್ದಿ ಯೋಜನೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಮ್ಮ ಬಜೆಟ್ ಭಾಷಣದ ವೇಳೆ ವಿಶೇಷ ನಿಧಿಯನ್ನು ಹಂಚಿಕೆ ಮಾಡಿದ್ದಾರೆ.

ಇದೆ ಮೊದಲ ಬಾರಿ ಸಂಸತ್ತಿನಲ್ಲಿ ಕಾಗದ ರಹಿತ ಬಜೆಟ್ ಮಂಡಿಸಿರುವ ನಿರ್ಮಲಾ, ರಸ್ತೆ ಹಾಗೂ ಹೆದ್ದಾರಿ ಯೋಜನೆಗಳಿಗಾಗಿ ಕೇರಳಕ್ಕೆ 65,000 ಕೋ.ರೂ. ಹಾಗೂ  ಪಶ್ಚಿಮಬಂಗಾಳಕ್ಕೆ 25,000 ಕೋ.ರೂ. ಹಂಚಿಕೆ ಮಾಡಿದರು. ಅಸ್ಸಾಂನ ರಸ್ತೆ ಮೂಲಭೂತ ಸೌಕರ್ಯದ ಅಭಿವೃದ್ದಿಗೆ 3,400 ಕೋ.ರೂ. ವಿತರಿಸಿದ್ದಾರೆ.

ಕೊಚ್ಚಿ ಮೆಟ್ರೋ ರೈಲ್ವೆಯ ಎರಡನೇ ಹಂತದ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, 11.5 ಕಿ.ಮೀ.ಉದ್ದದ ಮೆಟ್ರೋ 1,957.05 ಕೋ.ರೂ. ವೆಚ್ಚ ತಗಲಲಿದೆ ಎಂದು ಸೀತಾರಾಮನ್ ಪ್ರಕಟಿಸಿದರು.

ಚುನಾವಣೆಗೆ ಸಜ್ಜಾಗಿರುವ ತಮಿಳುನಾಡು ರಾಜ್ಯದಲ್ಲಿ 3,500 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ 1.03 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಸೀತಾರಾಮನ್ ಘೋಷಿಸಿದ್ದಾರೆ ಎಂದು Times Now ವರದಿ ಮಾಡಿದೆ.   

ಹೆಚ್ಚುವರಿಯಾಗಿ 8,500 ಕಿ.ಮೀ. ರಸ್ತೆ ಯೋಜನೆಗಳು ಹಾಗೂ 11,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಗಳು ಭಾರತ್ ಮಾಲಾ ಪರಿಯೋಜನಾ ಯೋಜನೆಯಡಿ ಮಾರ್ಚ್ 2022ರಲ್ಲಿ ಪೂರ್ಣವಾಗಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಕೇರಳ ಹಾಗೂ ಪ.ಬಂಗಾಳದಲ್ಲಿ ಈ ವರ್ಷದ ಎಪ್ರಿಲ್-ಮೇ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. 


SHARE THIS

Author:

0 التعليقات: