ಟೆಂಪೊ ಚಾಲಕನ ಮಗ ಈಗ ಕೋಟ್ಯಧಿಪತಿ
ಕೇವಲ ಒಂದು ತಿಂಗಳ ಹಿಂದಷ್ಟೇ ಈತನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. ತಂದೆ ಟೆಂಪೊ ಚಾಲಕ. 5 ವರ್ಷಗಳ ಹಿಂದಿನ ತನಕ ಇವರ ಮನೆಯಲ್ಲಿ ಟಿವಿಯೇ ಇರಲಿಲ್ಲ… ಇಂಥ ಕಿತ್ತು ತಿನ್ನುವ ಬಡತನದ ನಡುವೆಯೂ ಕ್ರಿಕೆಟ್ನಲ್ಲಿ ಮೇಲೇರಿ ಬಂದ ಈತನೀಗ ಕೋಟ್ಯಧಿಪತಿ. ಇದಕ್ಕೆ ಮೂಲವಾದದ್ದು ಗುರುವಾರದ ಐಪಿಎಲ್ ಹರಾಜು. ಇದರಲ್ಲಿ 1.20 ಕೋಟಿ ರೂ. ಮೊತ್ತಕ್ಕೆ ಮಾರಾಟವಾದ ಈ ಕ್ರಿಕೆಟಿಗನೇ ಸೌರಾಷ್ಟ್ರದ ಚೇತನ್ ಸಕಾರಿಯಾ!
ಎಡಗೈ ಬ್ಯಾಟ್ಸ್ಮನ್ ಹಾಗೂ ಎಡಗೈ ಮಧ್ಯಮ ವೇಗಿಯಾಗಿರುವ 22 ವರ್ಷದ ಚೇತನ್ ಸಕಾರಿಯಾ ಅವರನ್ನು ರಾಜಸ್ಥಾನ್ ರಾಯಲ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಇವರಿಗೆ ಆರ್ಸಿಬಿ ಪರ ಆಡುವ ಆಸೆಯಿತ್ತು. ಕಾರಣ, ಕಳೆದ ಯುಎಇ ಐಪಿಎಲ್ ವೇಳೆ ಚೇತನ್ ಆರ್ಸಿಬಿಯ ನೆಟ್ ಬೌಲರ್ ಆಗಿ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಇಷ್ಟು ಲಭಿಸಿಯೂ ಶೂನ್ಯ ಅನುಭವ! ;
ಈ ಸಂದರ್ಭದಲ್ಲಿ ಮಾತಾಡಿದ ಚೇತನ್ ಸಕಾರಿಯಾ, ತಾನೀಗ ಕೋಟ್ಯಧಿಪತಿಯಾದರೂ ಶೂನ್ಯ ಅನುಭವ ಆಗುತ್ತಿದೆ ಎಂದಿದ್ದಾರೆ. ಕಾರಣ, ಕಿರಿಯ ಸಹೋದರ ರಾಹುಲ್ ಸಕಾರಿಯಾನ ಅಗಲಿಕೆಯ ಆಘಾತ.
“ನನ್ನ ತಮ್ಮ ರಾಹುಲ್ ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ನಾನಾಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿದ್ದೆ. ಮನೆಗೆ ಬರುವ ತನಕ ರಾಹುಲ್ ಅಗಲಿಕೆಯನ್ನು ನನಗೆ ತಿಳಿಸದೆ ಗುಟ್ಟು ಮಾಡಿದ್ದರು. ಅನಂತರವೂ ಸ್ಪಷ್ಟವಾಗಿ ವಿಷಯ ತಿಳಿಸಿರಲಿಲ್ಲ. ಅವನೀಗ ಇದ್ದಿದ್ದರೆ ನನಗಿಂತ ಹೆಚ್ಚು ಖುಷಿ ಪಡುತ್ತಿದ್ದ…’ ಎಂದು ಚೇತನ್ ಹೇಳುವಾಗ ಅವರ ಕಣ್ಣಾಲಿ ತುಂಬಿ ಬಂದಿತ್ತು.
ತಂದೆ ಕಾಂಜಿಭಾಯ್ಗೆ ಚೇತನ್ ಕ್ರಿಕೆಟಿಗನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಮಾಮನ ಮಧ್ಯಸ್ಥಿಕೆ ಇಲ್ಲಿ ಫಲ ಕೊಟ್ಟಿತು. ಯಾವಾಗ ಚೇತನ್ ಕ್ರಿಕೆಟ್ನಲ್ಲಿ ಮಿಂಚಿ ಆರ್ಥಿಕವಾಗಿ ಗಟ್ಟಿಗೊಳ್ಳತೊಡಗಿದನೋ, ತಂದೆ ಟೆಂಪೊ ಚಾಲಕ ವೃತ್ತಿಗೆ ವಿದಾಯ ಹೇಳಿದರು. ಕಳೆದ ವರ್ಷ ಸೌರಾಷ್ಟ್ರ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವಲ್ಲಿ ಚೇತನ್ ಪಾತ್ರವೂ ಪ್ರಮುಖವಾಗಿತ್ತು.
ಚೇತನ್ ಬಂಪರ್ ಮೊತ್ತಕ್ಕೆ ಐಪಿಎಲ್ ತಂಡವನ್ನು ಸೇರಿಕೊಂಡ ಸುದ್ದಿ ಹೊರಬೀಳುತ್ತಲೇ ಅವರ ಫೋನ್ ಒಂದೇಸಮನೆ ರಿಂಗಣಿಸುತ್ತಿದೆ. ಎಲ್ಲರದೂ ಒಂದೇ ಪ್ರಶ್ನೆ-“ಇಷ್ಟು ದುಡ್ಡನ್ನು ಏನು ಮಾಡುತ್ತಿ?’ ಎಂದು. “ವಾಸಕ್ಕೆ ಚೆಂದವಾದ ಮನೆಯೊಂದನ್ನು ಕಟ್ಟಬೇಕು’ ಎಂಬುದು ಚೇತನ್ ನೀಡುವ ಉತ್ತರ!
ಆರ್ಸಿಬಿ ತಂಡದೊಂದಿಗೆ ಇದ್ದಾಗ ತರಬೇತುದಾರರಾದ ಹೆಸನ್ ಮತ್ತು ಕ್ಯಾಟಿಚ್ ನನ್ನಲ್ಲಿ ಭಾರೀ ವಿಶ್ವಾಸ ತುಂಬಿದ್ದರು. ಐಪಿಎಲ್ ಬಾಗಿಲು ಖಂಡಿತ ತೆರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಆರ್ಸಿಬಿ ಪರ ಆಡುವ ಮಹದಾಸೆ ಇತ್ತು.– ಚೇತನ್ ಸಕಾರಿಯ
0 التعليقات: