Thursday, 11 February 2021

ಪಶ್ಚಿಮ ಬಂಗಾಳದಲ್ಲಿ "ನಾನೇ ಗೋಲ್ ಕೀಪರ್" ಎಂದ ಮಮತಾ ಬ್ಯಾನರ್ಜಿ


ಪಶ್ಚಿಮ ಬಂಗಾಳದಲ್ಲಿ "ನಾನೇ ಗೋಲ್ ಕೀಪರ್" ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಫೆಬ್ರವರಿ.11: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಾವೊಬ್ಬರೇ ಏಕಾಂಗಿಯಾಗಿ ನಿಂತು ಹೋರಾಡುತ್ತೇವೆ ಎಂದು ಭಾರತೀಯ ಜನತಾ ಪಕ್ಷಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸವಾಲು ಹಾಕಿದ್ದಾರೆ.

ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಚುನಾವಣೆಯ ಆಟವನ್ನು ನ್ಯಾಯಯುತವಾಗಿ ಆಡೋಣ. ನೀವು ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಸೇರಿ ಆಟವಾಡಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಗೋಲ್ ಕೀಪರ್ ಆಗಿ ನಿಂತು ಚುನಾವಣೆ ಎದುರಿಸುತ್ತೇನೆ. ನೀವೆಷ್ಟು ಗೋಲ್ ಹೊಡೆಯುತ್ತೀರಾ ಎಂದು ನೋಡುತ್ತೇವೆ ಎಂದು ಬಿಜೆಪಿಗೆ ಸವಾಲ್ ಎಸೆದಿದ್ದಾರೆ.

"ನೀವು ನನ್ನನ್ನು ನಿಂದಿಸಬಹುದೇ ಹೊರತೂ ನಿರ್ಲಕ್ಷಿಸುವಂತಿಲ್ಲ. ರೈತರನ್ನು ಲೂಟಿ ಮಾಡಿದ್ದೀರಿ. ತಮ್ಮಿಷ್ಟದ ಧರ್ಮದ ಆಚರಣೆಗೆ ಅಡ್ಡಿ ಉಂಟು ಮಾಡಿದ್ದೀರಿ. ದಂಗೆಯನ್ನು ಸೃಷ್ಟಿ ಮಾಡಿದ್ದೆಲ್ಲ ಮುಗಿದ ಮೇಲೆ ಇದೀಗ ನಿಮಗೆ ಪಶ್ಚಿಮ ಬಂಗಾಳ ಬೇಕಾಗಿದೆಯೇ. ಇಂಥ ಜನರ ಎದುರಿಗೆ ನಾನು ಎಂದಿಗೂ ತಲೆ ಬಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

ಅಭಿವೃದ್ಧಿ ಮತ್ತು ವಿನಾಶದ ನಡುವಿನ ಹೋರಾಟ:

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷವು ನಡೆಸುತ್ತಿರುವ "ಪರಿವರ್ತನ ಯಾತ್ರೆ"ಯು ರಾಜ್ಯವನ್ನು ಬುವಾ-ಭಾಟಿಜಾ(ಚಿಕ್ಕಮ್ಮ ಮತ್ತು ಸೋದರಳಿ)ನಿಂದ ನಡೆಯುತ್ತಿರುವ ಭ್ರಷ್ಟಾಚಾರ ನಿಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ನಡೆದ ಪರಿವರ್ತನ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಯೋಜನೆಗಳನ್ನು ನೀವು ಮತ್ತು ನಿಮ್ಮ ಸೋದರಳಿ ಸೇರಿಕೊಂಡು ತಡೆ ಹಿಡಿದಿದ್ದೀರಿ. ಆದರೆ ಮೇ ತಿಂಗಳ ನಂತರದಲ್ಲಿ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ. ಅಂದಿನಿಂದ ಯಾವುದೇ ಯೋಜನೆಗಳನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವ ರೀತಿಯಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಜನರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುತ್ತಿದ್ದರೆ, ಮಮತಾ ಬ್ಯಾನರ್ಜಿಯವರು ಸೋದರಳಿಯ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಅಮಿತ್ ಶಾ ದೂಷಿಸಿದರು. ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮಾದರಿ ಮತ್ತು ಮಮತಾ ಬ್ಯಾನರ್ಜಿಯವರ ವಿನಾಶದ ಮಾದರಿ ನಡುವಿನ ಹೋರಾಟದ ಸಂಕೇತವಾಗಿರಲಿದೆ ಎಂದು ಹೇಳಿದರು.SHARE THIS

Author:

0 التعليقات: