ವಂಶಪರಂಪರೆ ರಾಜಕೀಯದಿಂದ ಕಾಂಗ್ರೆಸ್ ಪತನದತ್ತ: ಅಮಿತ್ ಶಾ
ಕರೈಕ್ಕಲ್ (ಪುದುಚೇರಿ): 'ವಂಶಪರಂಪರೆ ರಾಜಕೀಯದಿಂದ ದೇಶದಾದ್ಯಂತ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಇಲ್ಲಿ ನಡೆದ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಪುದುಚೇರಿಯಲ್ಲಿ ಈ ಹಿಂದೆ ಆಡಳಿತ ನಡೆಸಿದ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
'ವಿ. ನಾರಾಯಣಸ್ವಾಮಿ ಅವರು ಅಭಿವೃದ್ಧಿ ಕಡೆಗಣಿಸಿ ಕೇವಲ ಕೀಳು ರಾಜಕೀಯ ಮಾಡಿದರು. ಪುದುಚೇರಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡಿದ್ದ ₹15 ಸಾವಿರ ಕೋಟಿ ಮೊತ್ತದಲ್ಲಿ ಅಪಾರ ಕಮಿಷನ್ ಅನ್ನು ಗಾಂಧಿ ಕುಟುಂಬಕ್ಕೆ ನೀಡಿದರು. ಜನ ಸೇವೆಗಿಂತ ದೆಹಲಿ ಗಾಂಧಿ ಕುಟುಂಬದ ಸೇವೆಯಲ್ಲೇ ನಾರಾಯಣಸ್ವಾಮಿ ಅವರು ಸಮಯ ಕಳೆದರು' ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಆರಂಭಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿರುವುದನ್ನು ಪ್ರಸ್ತಾಪಿಸಿದ ಅವರು, 'ಎರಡು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಈ ಸಚಿವಾಲಯವನ್ನು ಆರಂಭಿಸಿದ್ದಾರೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ರಜೆಯ ಮೇಲೆ ತೆರಳಿದ್ದರು' ಎಂದು ವ್ಯಂಗ್ಯವಾಡಿದರು.
0 التعليقات: