Thursday, 11 February 2021

ಕೊವ್ಯಾಕ್ಸಿನ್ ಲಸಿಕೆ ನೀಡಿಕೆ ತಡೆಹಿಡಿಯಲು ಛತ್ತೀಸ್‌ಗಢ ಸರಕಾರ ಆಗ್ರಹ


 ಕೊವ್ಯಾಕ್ಸಿನ್ ಲಸಿಕೆ ನೀಡಿಕೆ ತಡೆಹಿಡಿಯಲು ಛತ್ತೀಸ್‌ಗಢ ಸರಕಾರ ಆಗ್ರಹ

ಹೊಸದಿಲ್ಲಿ, ಫೆ.12: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ತಡೆ ಹಿಡಿಯುವಂತೆ ಛತ್ತೀಸ್‌ಗಢ ಸರಕಾರ ಕೇಂದ್ರವನ್ನು ಆಗ್ರಹಿಸಿದೆ.

ಈ ಸಂಬಂಧ ಕೇಂದ್ರಕ್ಕೆ ಬರೆದ ಪತ್ರವನ್ನು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಟಿ.ಎಸ್.ಸಿಂಗ್‌ದೇವ್, ಲಸಿಕೆಯ ಮೂರನೇ ಹಂತದ ಪರೀಕ್ಷೆ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಮತ್ತು ಲಸಿಕೆಯ ಅವಧಿ ಪೂರ್ಣಗೊಳ್ಳುವ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಲಸಿಕೆಯನ್ನು ವಿರೋಧಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸುವವರೆಗೆ ರಾಜ್ಯಕ್ಕೆ ಕೊವ್ಯಾಕ್ಸಿನ್ ಪೂರೈಕೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಈ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಆತಂಕಗಳ ಬಗ್ಗೆ ವಿವರಣೆ ನೀಡಿದ್ದಾರೆ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಹಿಂದಿರುವುದು ಕಳವಳಕಾರಿ ಅಂಶ ಎಂದು ಅವರು ಹೇಳಿದ್ದಾರೆ. ರಾಜ್ಯಕ್ಕೆ ಪೂರೈಸಲಾಗುತ್ತಿರುವ ಲಸಿಕೆ ಸುರಕ್ಷಿತ ಹಾಗೂ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವಂಥದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.

ಮೂರನೇ ಹಂತದ ಪರೀಕ್ಷೆ ಪೂರ್ಣಗೊಳ್ಳುವ ಮುನ್ನವೇ ಔಷಧ ನಿಯಂತ್ರಕರು ಇದರ ಬಳಕೆಗೆ ಅನುಮತಿ ನೀಡಿದ್ದರು. ಇದನ್ನು ಕ್ಲಿನಿಕಲ್ ಟ್ರಯಲ್ ವಿಧಾನದಲ್ಲಿ ಬಳಸಲಾಗುತ್ತಿದೆ. ಅಂದರೆ ಲಸಿಕೆ ಪಡೆದವರ ಮೇಲೆ ನಿಗಾ ಇರಿಸಲಾಗುತ್ತದೆ. ದಿಲ್ಲಿಯಲ್ಲಿ ಕೇಂದ್ರ ಸರಕಾರ ನಿರ್ವಹಿಸುವ ಆರು ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರ ಪೈಕಿ ಶೇಕಡ 69.87 ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಆದರೆ ಮುಂಚೂಣಿ ಕಾರ್ಯಕರ್ತರ ಪೈಕಿ ಕೇವಲ ಶೇಕಡ 9.55ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.


SHARE THIS

Author:

0 التعليقات: