Friday, 5 February 2021

ಅನಿರ್ಧಿಷ್ಠಾವಧಿಗೆ ಕರ್ನಾಟಕ ವಿಧಾನಸಭೆ ಅಧಿವೇಶನ ಮುಂದೂಡಿಕೆ

 

ಅನಿರ್ಧಿಷ್ಠಾವಧಿಗೆ ಕರ್ನಾಟಕ ವಿಧಾನಸಭೆ ಅಧಿವೇಶನ ಮುಂದೂಡಿಕೆ

ಬೆಂಗಳೂರು: ವಿಪಕ್ಷಗಳ ಸಭಾತ್ಯಾಗದ ನಡುವೆಯೇ ಕರ್ನಾಟಕ ವಿಧಾನಸಭೆ ಅಧಿವೇಶನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.

ಕಳೆದ ಜನವರಿ 28ರಂದು ರಾಜ್ಯಪಾಲರ ಭಾಷಣದೊಂದಿಗೆ ಆರಂಭಗೊಂಡ ವಿಧಾನಸಭೆಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಇದಕ್ಕಿಂತ ಎರಡು ದಿನಗಳ ಮೊದಲು 'ಒಂದು ರಾಷ್ಟ್ರ-ಒಂದು ಚುನಾವಣೆ' ವಿಷಯದ ಕುರಿತು ಚರ್ಚೆ ನಡೆಯಲಿದೆ. ಇದರಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಇದು ದೇಶಕ್ಕೆ ಬೆಳಕು ಚೆಲ್ಲುವಂತೆ ಇರಬೇಕು ಎಂದು ಸಲಹೆ ನೀಡಿದರು.

ಕಾಮನ್ ವೆಲ್ತ್ ಫೆಬ್ರವರಿ 24ರಂದು ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ವಿಷಯ ಕುರಿತು ಸಮಾಲೋಚನಾ ಸಭೆ ನಡೆಯಲಿದೆ. ಕಾನೂನು ತಜ್ಞರು, ಹಿರಿಯ ಸಂಸದೀಯ ತಜ್ಞರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಈ ವ್ಯವಸ್ತೆಯ ಬಗ್ಗೆ ಜನರಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಕಾಗೇರಿ ತಿಳಿಸಿದರು.

ಅಧಿವೇಶನದಲ್ಲಿ ಒಟ್ಟು 18 ಗಮನ ಸೆಳೆಯುವ ಸೂಚನೆಗಳಿಗೆ ಉತ್ತರ ನೀಡಲಾಗಿದೆ. ಜನವರಿ 28ರಿಂದ ಆರಂಭಗೊಂಡ 7 ದಿನಗಳಲ್ಲಿ 33 ಗಂಟೆ 50 ನಿಮಿಷಗಳ ಕಾಲ ಕಲಾಪ ನಡೆದಿದೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ 20 ಸದಸ್ಯರು 12 ಗಂಟೆ 34 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಇಂದು ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು. ಇತ್ತೀಚಿನ ನಿಧನರಾದವರಿಗೆ ಸಂತಾಪ ಸೂಚಿಸಿ ಅಂಗೀಕರಿಸಲಾಯಿತು. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯಪಾಲರು ಅನುಮೋದನೆ ನೀಡಿದ ವಿಧೇಯಕಗಳನ್ನು ಮಂಡಿಸಲಾಗಿದೆ. ಲೆಕ್ಕಪರಿಶೋಧನೆ ವರದಿಯನ್ನು ಮಂಡಿಸಲಾಗಿದೆ. ಭರವಸೆ ಸಮಿತಿಯ ವರದಿಯನ್ನೂ ಮಂಡಿಸಲಾಗಿದೆ. 14 ವಿಧೇಯಕವನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಸಭಾಧ್ಯಕ್ಷರು ಮುಂದೂಡಿದರು.

ಕಾಂಗ್ರೆಸ್ ಸದಸ್ಯರ ಸಭಾತ್ಯಾಗ

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ನೀಡಿದ ಉತ್ತರ ತೃಪ್ತಿ ತಂದಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ನೀಡಿದ ಉತ್ತರ ತೃಪ್ತಿ ತಂದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ತಾವು ಹೇಳಿಲ್ಲ, ನಿಮ್ಮ ಪಕ್ಷದ ಶಾಸಕರೇ, ಮುಖಂಡರೇ ಹೇಳುತ್ತಿದ್ದಾರೆ. ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಸಮರ್ಥ ಮುಖ್ಯಮಂತ್ರಿ ಮಾಡುವ ಕೆಲಸವೇ ? ಮಂತ್ರಿಮಂಡಲ ಮಾಡಿದ ಮೇಲೆ ನಿಮ್ಮ ಶಾಸಕರು ನೀಡಿದ ಹೇಳಿಕೆ ಗಮನಿಸಿದ್ದೀರಾ ? ಅದನ್ನೇ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಈ ಸರ್ಕಾರ ವಚನಭ್ರಷ್ಟ ಸರ್ಕಾರ ಎಂದು ಹೇಳಿದ್ದೇನೆ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ 223 ಭರವಸೆಗಳ ಪೈಕಿ 130 ಭರವಸೆಗಳ ಬಗ್ಗೆ ಮಾತ್ರ ಆದೇಶ ಹೊರಡಿಸಲಾಗಿದ್ದು, 49 ಭರವಸೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಪಟ್ಟಿ ಮಾಡಿ ಭಾಷಣ ಮಾಡಿದ್ದೆ ಎಂದು ಹೇಳಿದರು.


SHARE THIS

Author:

0 التعليقات: