ಬೆಲೆ ಕುಸಿತದಿಂದ ಕಂಗಾಲಾಗಿದ್ದ ಟೊಮೆಟೊ ಬೆಳೆಗಾರರಿಗಾಗಿ ಐಟಿ ಉದ್ಯೋಗಿಗಳು ಮಾಡಿದ್ದೇನು ಗೊತ್ತೇ?
ಹೈದರಾಬಾದ್: ಇತ್ತೀಚೆಗೆ ಟೊಮೆಟೊ ಬೆಲೆ ತೀವ್ರ ಕುಸಿತ ಕಂಡು ಕೆಜಿಗೆ ಎರಡು ರೂಪಾಯಿ ತಲುಪಿದಾಗ ಹಲವು ಬೆಳೆಗಾರರು ಕಂಗಾಲಾಗಿದ್ದರಲ್ಲದೆ ಉತ್ತಮ ರೈತ ಪ್ರಶಸ್ತಿಯನ್ನು ಪಡೆದಿದ್ದ ನಾಗಮಣಿಯಂತಹ ಅನೇಕ ಬೆಳೆಗಾರರು ಟೊಮೆಟೊ ಹಣ್ಣುಗಳನ್ನು ಕೀಳದೇ ಇಡೀ ತೋಟವನ್ನೇ ಅಗೆಯಲು ತೀರ್ಮಾನಿಸಿದ್ದರು.
ಟೊಮೆಟೊ ಬೆಳೆಗಾರರ ಪರದಾಟದ ಕುರಿತು ತಿಳಿದುಕೊಂಡ ಫೋರಂ ಆಫ್ ಐಟಿ ಪ್ರೊಫೆಶನಲ್ಸ್ ಎಂಬ ಐಟಿ ವೃತ್ತಿಪರರ ಸಂಘಟನೆಗೆ ಸೇರಿದ ಒಂದು ಟೆಕ್ಕಿಗಳ ಗುಂಪು ಬೆಳೆಗಾರರನ್ನು ಸಂಪರ್ಕಿಸಿ ಅವರಿಂದ ಟೊಮೆಟೊಗಳನ್ನು ಪಡೆದುಕೊಂಡು ಅವುಗಳನ್ನು ಸಾಗಾಟ ಮಾಡುವ ವ್ಯವಸ್ಥೆ ಮಾಡಿದೆ. ಹೀಗೆ ಕಳೆದ ಶನಿವಾರ ಸುಮಾರು 2.1 ಟನ್ನುಗಳಷ್ಟಿದ್ದ ಟೊಮ್ಯಾಟೋಗಳನ್ನು ನಗರದ ಒಂಬತ್ತು ಕಡೆಗಳಲ್ಲಿ ಕೇವಲ ಅರ್ಧ ಗಂಟೆಯೊಳಗೆ ಕೆಜಿಗೆ ರೂ. 15ರಂತೆ ಮಾರಾಟ ಮಾಡಿ ಮಾರಾಟದಿಂದ ದೊರೆತ ಹಣವನ್ನು ಬೆಳೆಗಾರರಿಗೆ ತಲುಪಿಸಿ ಅವರಲ್ಲಿ ಸಂತೃಪ್ತಿಯ ನಗೆಯನ್ನು ಈ ಟೆಕ್ಕಿಗಳು ಮೂಡಿಸಿದ್ದಾರೆ.
ಅವರ ಈ 'ಬೈ ಫಾರ್ ಫಾರ್ಮರ್ಸ್' (ರೈತರಿಗಾಗಿ ಖರೀದಿಸಿ) ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಪಡೆಯಿತಲ್ಲದೆ ಕೆಲವರು ನಿಗದಿ ಪಡಿಸಿದ ಬೆಲೆಗಿಂತ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ ರೈತರಿಗಾಗಿ ಖರೀದಿಸಲು ಸಿದ್ಧ ಎಂದರೆ ಇನ್ನು ಕೆಲವರಂತೂ ಒಮ್ಮೆಗೆ 10 ಕೆಜಿ ಖರೀದಿಸಲೂ ಮುಂದೆ ಬಂದಿದ್ದರು.
ಕಳೆದ ಶನಿವಾರ ಈ ಟೆಕ್ಕಿಗಳ ಗುಂಪು ನಲ್ಗೊಂಡದಿಂದ ಸಂಗ್ರಹಿಸಿದ ಟೊಮೆಟೊಗಳನ್ನು ಉಪ್ಪಳ್, ವನಸ್ಥಲಿಪುರಂ, ಕುಕಟ್ಪಳ್ಳಿ, ಮಿಯಾಪುರ್, ಹೈಟೆಕ್ ಸಿಟಿ, ಬಿಎಚ್ಇಎಲ್ ಟೌನ್ಶಿಪ್, ಮಣಿಕೊಂಡ ಮುಂತಾದೆಡೆ ಕೆಲ ಸ್ವಯಂಸೇವಕರ ಸಹಾಯದಿಂದ ಮಾರಾಟ ಮಾಡಿದರು.
"ತಮ್ಮ ತೋಟಕ್ಕೆ ಪ್ರತಿ ದಿನ ತಮ್ಮ ಸ್ಕೂಟರ್ನಲ್ಲಿ ತೆರಳುವ ಅತ್ಯುತ್ತಮ ರೈತ ಪ್ರಶಸ್ತಿ ಪಡೆದ ಮಹಿಳೆಯೊಬ್ಬರು ಕನಿಷ್ಠ ಬೆಂಬಲ ದೊರೆಯದೆ ತೋಟವನ್ನು ಅಗೆಯಲು ನಿರ್ಧರಿಸಿದ್ದನ್ನು ತಿಳಿದು ಬೇಸರಗೊಂಡೆವು. ಬೆಳೆಗಾರರನ್ನು ಸಂಪರ್ಕಿಸಿದಾಗ ಸಾಗಾಟ ವೆಚ್ಚದ ಕುರಿತು ಚಿಂತೆ ವ್ಯಕ್ತಪಡಿಸಿದರು. ನಾವು ಸ್ವಲ್ಪ ಹಣ ಸಂಗ್ರಹಿಸಿ ವಾಹನದ ಏರ್ಪಾಟು ಮಾಡಿದೆವು,'' ಎಂದು ಫೋರಂ ಅಧ್ಯಕ್ಷ ಕಿರಣ್ ಚಂದ್ರ ಹೇಳುತ್ತಾರೆ.
ಈ ರೀತಿ ಬೆಳೆಗಾರರಿಂದ ಪ್ರತಿ ಶನಿವಾರ ಟೊಮೆಟೊ ಖರೀದಿಸಿ ಮಾರಾಟ ಮಾಡುವ ಕುರಿತಂತೆ ಫೋರಂ ಚಿಂತಿಸುತ್ತಿದೆ.
0 التعليقات: