Monday, 15 February 2021

ಮಧ್ಯಪ್ರದೇಶ: ಪತಿಯಿಂದ ಪ್ರತ್ಯೇಕವಾದ ಮಹಿಳೆಗೆ ಹೀಗೊಂದು ಅಮಾನವೀಯ ಶಿಕ್ಷೆ

 

ಮಧ್ಯಪ್ರದೇಶ: ಪತಿಯಿಂದ ಪ್ರತ್ಯೇಕವಾದ ಮಹಿಳೆಗೆ ಹೀಗೊಂದು ಅಮಾನವೀಯ ಶಿಕ್ಷೆ

ಭೋಪಾಲ್: ಪರಸ್ಪರ ಒಪ್ಪಿಗೆಯಂತೆ ಪತಿಗೆ ವಿಚ್ಛೇದನ ನೀಡಿದ ಮಹಿಳೆಯೊಬ್ಬರನ್ನು ಅಪಹರಿಸಿ, ಬಲವಂತವಾಗಿ ಪತಿಯ ಕುಟುಂಬದ ಸದಸ್ಯರೊಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೂರು ಕಿಲೋಮೀಟರ್ ನಡೆಯುವಂತೆ ಶಿಕ್ಷೆ ವಿಧಿಸಿದ ವಿಚಿತ್ರ ಹಾಗೂ ಅವಮಾನಕರ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಿಂದ ವರದಿಯಾಗಿದೆ.

ಬುಡಕಟ್ಟು ಮಹಿಳೆಯೊಬ್ಬರು ತನ್ನ ಭಾವನನ್ನು ಹೆಗಲ ಮೇಲೆ ಕೂರಿಸಿಕೊಂಡು ನಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಜತೆಗೆ ಕುಟುಂಬದವರು ಮತ್ತು ಗ್ರಾಮಸ್ಥರು ದೊಣ್ಣೆ ಮತ್ತು ಕ್ರಿಕೆಟ್ ಬ್ಯಾಟ್‌ಗಳನ್ನು ಹಿಡಿದುಕೊಂಡು ನಡೆಯುತ್ತಾ, ಮಹಿಳೆಯನ್ನು ಅವಮಾನಿಸಿ ಸಂಭ್ರಮಿಸುತ್ತಿರುವ ಚಿತ್ರಣವಿದೆ. ಮಹಿಳೆ ನಡೆಯುವುದು ನಿಧಾನವಾದಾಗಲೆಲ್ಲ ದೊಣ್ಣೆಯಿಂದ ಥಳಿಸುತ್ತಿರುವುದು ಕಂಡುಬರುತ್ತಿದೆ.

ಗುಣಾ ಜಿಲ್ಲೆಯ ಸಗಾಯ್ ಮತ್ತು ಬನ್ಸ್ ಖೇದಿ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪರಸ್ಪರ ಒಪ್ಪಿಗೆಯಂತೆ ಪತಿಯನ್ನು ತ್ಯಜಿಸಿ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಹೊಂದಿದ್ದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಮಾಜಿ ಪತಿಯ ಕುಟುಂಬದವರು ಮತ್ತು ಆ ಗ್ರಾಮದ ಇತರರು ಮಹಿಳೆಯನ್ನು ಅಪಹರಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇಂಥದ್ದೇ ಘಟನೆ ಕಳೆದ ಜುಲೈನಲ್ಲಿ ಮಧ್ಯಪ್ರದೇಶದಿಂದ ವರದಿಯಾಗಿತ್ತು.


SHARE THIS

Author:

0 التعليقات: