Saturday, 6 February 2021

"ಮಾತನಾಡುವಾಗ ಎಚ್ಚರ ವಹಿಸಿ": ಸಚಿನ್‌ ತೆಂಡೂಲ್ಕರ್‌ ಗೆ ಶರದ್‌ ಪವಾರ್‌ ಸಲಹೆ


 "ಮಾತನಾಡುವಾಗ ಎಚ್ಚರ ವಹಿಸಿ": ಸಚಿನ್‌ ತೆಂಡೂಲ್ಕರ್‌ ಗೆ ಶರದ್‌ ಪವಾರ್‌ ಸಲಹೆ

ಮುಂಬೈ: ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಸಲಹೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಪಾಪ್ ತಾರೆ ರಿಹಾನ್ನಾ ಭಾರತದ ರೈತರ ಪ್ರತಿಭಟನೆಯ ಕುರಿತಾಗಿ ಆರು ಪದಗಳ ಟ್ವೀಟ್ ಗೆ ಭಾರತದ ಕ್ರೀಡಾಪಟುಗಳು, ನಟರು ಹಾಗೂ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿನ್ ತೆಂಡುಲ್ಕರ್ ಕೂಡ ರಿಹಾನ್ನಾ ಟ್ವೀಟನ್ನು ಟೀಕಿಸಿದ್ದರು.

ತೆಂಡುಲ್ಕರ್ ಟ್ವೀಟಿಸಿದ ಕೆಲವು ದಿನಗಳ ಬಳಿಕ ಹೇಳಿಕೆ ನೀಡಿದ ಪವಾರ್, ಭಾರತೀಯ ಸೆಲೆಬ್ರಿಟಿಗಳ ನಿಲುವಿನ ಬಗ್ಗೆ ಹಲವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಸಚಿನ್‍ಗೆ ನಾನು ಸಲಹೆ ನೀಡುತ್ತೇನೆ ಎಂದು ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ರೈತ ಪ್ರತಿಭಟನಾಕಾರರನ್ನು ಖಲಿಸ್ತಾನಿಗಳು ಹಾಗೂ ಭಯೋತ್ಪಾದಕರು ಎಂದು ಕರೆಯುವುದನ್ನು ಟೀಕಿಸಿದ ಪವಾರ್, ಚಳವಳಿಗಾರರು ನಮ್ಮ ದೇಶವನ್ನು ಪೋಷಿಸುವ ರೈತರು.…ಅವರನ್ನು ಖಲಿಸ್ತಾನಿಗಳು ಅಥವಾ ಭಯೋತ್ಪಾದಕರು ಎಂದು ಕರೆಯುವುದು ಸರಿಯಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಕೃಷಿ ಸಚಿವರಾಗಿದ್ದ ಪವಾರ್ ಹೇಳಿದ್ದಾಗಿ ಪಿಟಿಐ ವರದಿಮಾಡಿದೆ.


SHARE THIS

Author:

0 التعليقات: