Thursday, 25 February 2021

ರಾಹುಲ್‌ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ವ್ಯತ್ಯಾಸ ಇಲ್ಲ! -ಪಿಣರಾಯಿ ವಿಜಯನ್


  ರಾಹುಲ್‌ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ವ್ಯತ್ಯಾಸ ಇಲ್ಲ! -ಪಿಣರಾಯಿ ವಿಜಯನ್

ತಿರುವನಂತಪುರಂ, ಫೆ.26: ವಯನಾಡ್ ಸಂಸದ ರಾಹುಲ್‌ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೇರಳದ ಬಗ್ಗೆ ಭಿನ್ನ ದೃಷ್ಟಿಕೋನ ಹೊಂದಿರಬಹುದು; ಆದರೆ ಎಡಪಕ್ಷಗಳ ವಿಚಾರದಲ್ಲಿ ಇಬ್ಬರ ಭಾವನೆಯೂ ಒಂದೇ; ಆ ವಿಚಾರದಲ್ಲಿ ಅವರು ಒಗ್ಗಟ್ಟಾಗಿದ್ದಾರೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೇವಡಿ ಮಾಡಿದ್ದಾರೆ.

ಕೇರಳಕ್ಕೆ ಭೇಟಿ ನೀಡಿದ್ದ ಉಭಯ ಮುಖಂಡರು ಎಡಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದನ್ನು ಉಲ್ಲೇಖಿಸಿದ ವಿಜಯನ್, "ರಾಹುಲ್‌ ಗಾಂಧಿ ಕೇರಳಕ್ಕೆ ಬಂದು ರೈತರ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ; ಸಮುದ್ರದಲ್ಲಿ ಮೀನುಗಾರರ ಜತೆ ಈಜಿದ್ದಾರೆ; ಆದರೆ ದೇಶದ ಇತರೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿರ್ಲಕ್ಷಿಸಿದ್ದಾರೆ... ಏನೇ ಇರಲಿ ಅವರ ಹೃದಯವೈಶಾಲ್ಯ ಮೆಚ್ಚಬೇಕು" ಎಂದು ವಿಜಯ್ ಹೇಳಿದರು.

1990ರ ದಶಕದಿಂದಲೂ ಕಾಂಗ್ರೆಸ್ ಪಕ್ಷ ರೈತ ವಿರೋಧಿ ಧೋರಣೆ ಅನುಸರಿಸುತ್ತಾ ಬಂದಿದೆ ಎಂದು ಆಪಾದಿಸಿದ ಪಿಣರಾಯಿ, ದೇಶದ ರೈತರನ್ನು ಕಾಂಗ್ರೆಸ್ ಪಕ್ಷ ಆತ್ಮಹತ್ಯೆಗೆ ತಳ್ಳಿದೆ. ಇದಕ್ಕೆ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ವಯನಾಡ್‌ನಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿದ್ದ ರಾಹುಲ್, ಎಡರಂಗ ಸರಕಾರದ ಮೇಲೆ ವಾಗ್ದಾಳಿ ನಡೆಸಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿಲ್ಲ ಹಾಗೂ ಮೀನುಗಾರರ ಜೀವನಾಧಾರವನ್ನು ನಾಶಪಡಿಸಿದೆ ಎಂದು ಆಪಾದಿಸಿದ್ದರು.

ಪತ್ರಕರ್ತರ ಜತೆ ಮಾತನಾಡಿದ ವಿಜಯನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧವೂ ಹರಿಹಾಯ್ದರು. "ಕೇರಳ ಪ್ರತಿಯೊಂದರಲ್ಲೂ ಹಿಂದಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಇಲ್ಲಿ ಉದ್ಯೋಗವಿಲ್ಲದೇ ಯುವಕರು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಪೈಕಿ ಶೇಕಡ 15ರಷ್ಟು ಮಂದಿ ಉತ್ತರ ಪ್ರದೇಶದವರು. ಅವರಿಗೆ ವಿಮೆ ಹಾಗೂ ಇತರ ಸೌಲಭ್ಯ ನೀಡಲಾಗಿದೆ. ಎಡರಂಗ ಸರಕಾರ, ಜನ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಆದರೆ ಕಳೆದ ಐದು ವರ್ಷದಲ್ಲಿ ಕೇರಳದಲ್ಲಿ ಯಾವುದೇ ಕೋಮುಗಲಭೆ ಆಗಿಲ್ಲ. ಆದರೆ ಉತ್ತರ ಪ್ರದೇಶದ ಸ್ಥಿತಿ ಏನು? ಮಹಿಳೆಯರ ವಿರುದ್ಧದ ಅಪರಾಧಗಳು ಉತ್ತರ ಪ್ರದೇಶದಲ್ಲಿ ಅತ್ಯಧಿಕ" ಎಂದು ಹೇಳಿದರು.


SHARE THIS

Author:

0 التعليقات: