Wednesday, 17 February 2021

ಪಂಜಾಬ್ ನಗರ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಗೆಲುವು, ಬಿಜೆಪಿಗೆ ತೀವ್ರ ಹಿನ್ನಡೆ


 ಪಂಜಾಬ್ ನಗರ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಗೆಲುವು, ಬಿಜೆಪಿಗೆ ತೀವ್ರ ಹಿನ್ನಡೆ

ಚಂಡೀಗಡ: ಪಂಜಾಬ್ ನ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ನಿರ್ವಹಣೆ ತೋರಿದೆ. ಮತ ಎಣಿಕೆ ಬುಧವಾರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ 7 ಮಹಾನಗರ ಪಾಲಿಕೆಗಳಲ್ಲಿ  6ರಲ್ಲಿ ಗೆಲುವು ಸಾಧಿಸಿದೆ.

ಮೊಗಾ, ಹೊಶಿಯಾರ್ ಪುರ, ಕಪುರ್ಥಲ, ಅಬೊಹರ್, ಪಠಾಣ್ ಕೋಟ್ ಹಾಗೂ ಬಠಿಂಡಾ ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಥಿಂಡಾ ಮಹಾನಗರ ಪಾಲಿಕೆಯು 53 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಪಾಲಾಗಿದೆ.

ಬಠಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ(ಎಸ್ ಎಡಿ) ಹರ್ ಸಿಮ್ರತ್ ಕೌರ್ ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಅವರು ತನ್ನ ದೀರ್ಘ ಕಾಲದ ಮೈತ್ರಿ ಪಕ್ಷ ಬಿಜೆಪಿಯಿಂದ ದೂರ ಸರಿದಿದ್ದರು.

ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ವಿತ್ತ ಸಚಿವ ಮನ್ ಪ್ರೀತ್ ಸಿಂಗ್ ಬಾದಲ್ ಬಠಿಂಡಾ ನಗರ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಬಾರಿ ಮಹಾ ನಗರಪಾಲಿಕೆಯ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು.

 ಬಿಜೆಪಿ ಈ ಚುನಾವಣೆಯಲ್ಲಿ  ಭಾರೀ ಹಿನ್ನಡೆ ಅನುಭವಿಸಿದ್ದು, ಇತ್ತೀಚೆಗಿನ ವರೆಗೆ ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಸ್ಪರ್ಧಿಸುತ್ತಿತ್ತು. ಈ ಬಾರಿ ಬಿಜೆಪಿ ಹಾಗೂ ಎಸ್ ಎಡಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ಫೆಬ್ರವರಿ 14ರಂದು 109 ಮುನ್ಸಿಪಲ್ ಕೌನ್ಸಿಲ್ ಗಳು, ನಗರ ಪಂಚಾಯತ್ ಹಾಗೂ 7 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿತ್ತು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿ ಭಟನೆ ನಡೆಸುತ್ತಿರುವ ಹೊರತಾಗಿಯೂ ಶೇ.71.39ರಷ್ಟು ಮತದಾನವಾಗಿತ್ತು.


SHARE THIS

Author:

0 التعليقات: