Thursday, 18 February 2021

ಭಾರತದೊಂದಿಗಿನ ಘರ್ಷಣೆಯಲ್ಲಿ ತನ್ನ ಸೈನಿಕರು ಮೃತಪಟ್ಟಿದ್ದಾರೆಂದು ಒಪ್ಪಿಕೊಂಡ ಚೀನಾ


 ಭಾರತದೊಂದಿಗಿನ ಘರ್ಷಣೆಯಲ್ಲಿ ತನ್ನ ಸೈನಿಕರು ಮೃತಪಟ್ಟಿದ್ದಾರೆಂದು ಒಪ್ಪಿಕೊಂಡ ಚೀನಾ

ಹೊಸದಿಲ್ಲಿ: ಕಳೆದ ವರ್ಷ ಜೂನ್ ನಲ್ಲಿ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಗಡಿ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ನಾಲ್ವರು ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್ ಎ)ಯೋಧರು ಮೃತಪಟ್ಟಿದ್ದರು ಎಂದು ಚೀನಾ ಹೇಳಿಕೆ ನೀಡಿದೆ.  ಇದೇ ಮೊದಲ ಬಾರಿ ಘರ್ಷಣೆಯಲ್ಲಿ ಮೃತಪಟ್ಟಿದ್ದ ಸೈನಿಕರ ಹೆಸರು ಹಾಗೂ ವಿವರಗಳನ್ನು ಚೀನಾ ಹಂಚಿಕೊಂಡಿದೆ.

ಚೀನಾದ ಸರಕಾರಿ ಮುಖವಾಣಿ 'ಗ್ಲೋಬಲ್ ಟೈಮ್ಸ್ನ'ಲ್ಲಿ ಶುಕ್ರವಾರ ಪ್ರಕಟವಾದ ವರದಿಯಲ್ಲಿ ಭಾರತದ ಸೈನಿಕರೊಂದಿಗೆ ಕಳೆದ ವರ್ಷ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಪ್ರಾಣತ್ಯಾಗ ಮಾಡಿದ್ದ ಚೀನಾದ ಐವರು ಪ್ರಮುಖ ಅಧಿಕಾರಿಗಳು ಹಾಗೂ ಸೈನಿಕರನ್ನು ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್ ಗುರುತಿಸಿದೆ ಎಂದು ವರದಿ ಮಾಡಿದೆ.

ಕರಕೋರಮ್ ಪರ್ವತ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಚೀನಾದ ಐವರು ಪ್ರಮುಖ ಅಧಿಕಾರಿಗಳು ಹಾಗೂ ಸೈನಿಕರನ್ನು 2020ರ ಜೂನ್ ನಲ್ಲಿ ಗಲ್ವಾನ್‍ ಕಣಿವೆಯಲ್ಲಿ ಭಾರತದೊಂದಿಗಿನ ಸಂಘರ್ಷದಲ್ಲಿ ಕೊಡುಗೆ ನೀಡಿದ್ದಕ್ಕಾಗಿ ಚೀನಾದ ಕೇಂದ್ರ ಮಿಲಿಟರಿ ಆಯೋಗ ಗುರುತಿಸಿದೆ ಎಂದು 'ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.

ಚೀನಾವು ಇದೇ ಮೊದಲ ಬಾರಿ ಲಡಾಖ್ ನಲ್ಲಿ ಭಾರತೀಯ ಸೈನಿಕರೊಂದಿಗೆ ನಡೆಸಿದ್ದ ಸಂಘರ್ಷದಲ್ಲಿ ಮೃತಪಟ್ಟಿದ್ದ   ಯೋಧರ ವಿವರಗಳನ್ನು  ಹಂಚಿಕೊಂಡಿದೆ. ಲಡಾಖ್ ಸಂಘರ್ಷದಲ್ಲಿ ಚೀನಾದ 20 ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿತ್ತು.ಈ ಮೊದಲು ಚೀನಾ ಎಷ್ಟುಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಬಹಿರಂಗಪಡಿಸಲು ನಿರಾಕರಿಸಿತ್ತು. ಪೂರ್ವ ಲಡಾಖ್ ನಲ್ಲಿ ಪಿಎಲ್ ಎ ಸೈನಿಕರು ಮೃತಪಟ್ಟಿದ್ದಾರೆಂಬ ವರದಿಗಳು “ಸುಳ್ಳು ಸುದ್ದಿ’’ಎಂದು ಚೀನಾ ಹೇಳಿತ್ತು.

ಭಾರತ ಹಾಗೂ ಚೀನಾದ ನಡುವಿನ ಗಡಿ ಸಂಘರ್ಷವು ಕಳೆದ ಮೇನಲ್ಲಿ ಮೊದಲಿಗೆ ಕಾಣಿಸಿಕೊಂಡಿತ್ತು. ಜೂನ್ 15ರಂದು ಉಭಯ ದೇಶಗಳ ಸೈನಿಕರು ಪಟ್ರೋಲ್ ಪಾಯಿಂಟ್ 14ರ ಸಮೀಪ ತೀವ್ರ ಸಂಘರ್ಷದಲ್ಲಿ ತೊಡಗಿದ್ದವು. ಆಗ ಪರಸ್ಪರ ಗುಂಡು ಹಾರಾಟ ನಡೆದಿರಲಿಲ್ಲ. ಚೀನಾದ ಸೈನಿಕರು ಕಲ್ಲುಗಳು, ಮೊಳೆಗಳಿರುವ ಸ್ಟಿಕ್ ಗಳಿಂದ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಗಲ್ವಾನ್ ನಲ್ಲಿ ನಡೆದಿದ್ದ ಹಿಂಸಾತ್ಮಕ ಘರ್ಷಣೆಯು ಸುಮಾರು 45 ವರ್ಷಗಳ ಬಳಿಕ ಅತ್ಯಂತ ಗಂಭೀರ ಮಿಲಿಟರಿ ಸಂಘರ್ಷವಾಗಿತ್ತು.SHARE THIS

Author:

0 التعليقات: