Thursday, 11 February 2021

ಮೋದಿ ಜತೆಗೆ ದೂರವಾಣಿ ಸಂಭಾಷಣೆಯಲ್ಲಿ 'ಇತ್ತೀಚಿಗಿನ ಪ್ರತಿಭಟನೆಗಳ' ಕುರಿತು ಚರ್ಚಿಸಿದ ಕೆನಡಾ ಪ್ರಧಾನಿ

 

ಮೋದಿ ಜತೆಗೆ ದೂರವಾಣಿ ಸಂಭಾಷಣೆಯಲ್ಲಿ 'ಇತ್ತೀಚಿಗಿನ ಪ್ರತಿಭಟನೆಗಳ' ಕುರಿತು ಚರ್ಚಿಸಿದ ಕೆನಡಾ ಪ್ರಧಾನಿ

ಹೊಸದಿಲ್ಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಬುಧವಾರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜತೆ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಪ್ರಜಾಪ್ರಭುತ್ವ ತತ್ವಗಳಿಗೆ  ತಮ್ಮ ಬದ್ಧತೆ ಕುರಿತು ಹಾಗೂ "ಇತ್ತೀಚಿಗಿನ ಪ್ರತಿಭಟನೆಗಳು ಹಾಗೂ  ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸುವ ಮಹತ್ವದ" ಬಗ್ಗೆ ಚರ್ಚಿಸಿದರು ಎಂದು ಟ್ರೂಡೊ ಅವರ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ಟ್ರೂಡೊ ಅವರ ಹೇಳಿಕೆಯಲ್ಲಿ ಪ್ರತಿಭಟನೆಗಳ ಕುರಿತು ಇರುವ ಉಲ್ಲೇಖ ನೂತನ ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆಯಾಗಿತ್ತು ಎಂಬುದು ಸ್ಪಷ್ಟ. ಟ್ರೂಡೊ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ರೈತರನ್ನು ಬೆಂಬಲಿಸಿ ಮಾತನಾಡಿದ್ದರಲ್ಲದೆ ತಮ್ಮ ದೇಶ ಯಾವತ್ತೂ ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದರು. ಆದರೆ ಅವರ ಈ ಹೇಳಿಕೆ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಎಂದು ಭಾರತ ಸರಕಾರ ಆಕ್ಷೇಪಿಸಿತ್ತಲ್ಲದೆ ಈ ಕುರಿತು ತನ್ನ ಅಭಿಪ್ರಾಯವನ್ನು ಕೆನಡಿಯನ್ ಹೈಕಮಿಷನರ್ ಅವರನ್ನು ಕರೆಸಿ ಅವರಿಗೆ ತಿಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ತರುವಾಯ ಭಾರತದ ಪ್ರಧಾನಿ ಕಚೇರಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಕೆನಡಾ ಮನವಿ ಮಾಡಿದಂತೆ ಕೋವಿಡ್ ಲಸಿಕೆಗಳನ್ನು ಒದಗಿಸುವ ಕುರಿತಂತೆ ಭಾರತ ತನ್ನ ಕೈಲಾದಷ್ಟು ಪ್ರಯತ್ನಿಸಲಿದೆ ಎಂದು ಪ್ರಧಾನಿ ಮೋದಿ ಅವರು ಟ್ರುಡಿಯೋ ಅವರಿಗೆ ಭರವಸೆ ನೀಡಿದ್ದಾರೆಂದು ತಿಳಿಸಿದೆ.


SHARE THIS

Author:

0 التعليقات: