ಕೇರಳದಲ್ಲಿ ಕೊರೋನ ಹೆಚ್ಚಳ; ದ.ಕ.ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ: ಡಿಸಿ ಡಾ. ರಾಜೇಂದ್ರ
ಮಂಗಳೂರು, ಫೆ. 8: ಕೇರಳದಲ್ಲಿ ಕೊರೋನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಿನನಿತ್ಯ ಕೆಲಸ ಕಾರ್ಯ, ಕಾಲೇಜುಗಳಿಗಾಗಿ ದ.ಕ. ಜಿಲ್ಲೆಗೆ ಆಗಮಿಸುವ ಅಲ್ಲಿನವರನ್ನು ಸೂಕ್ತ ತಪಾಸಣೆಗೊಳಪಡಿಸಿ ಜಿಲ್ಲೆಯಲ್ಲಿ ಕೊರೋನ ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಆಯುಷ್ ಕಚೇರಿಯಲ್ಲಿ ಇಂದು ಪೊಲೀಸ್ ಆಯುಕ್ತರು, ಡಿಎಚ್ಒ ಜತೆ ನಡೆಸಲಾದ ತುರ್ತು ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಡಾ. ರಾಜೇಂದ್ರ ಈ ಪ್ರತಿಕ್ರಿಯೆ ನೀಡಿದರು.
ಜನಸಂಚಾರಕ್ಕೆ ತೊಂದರೆಯಾಗದಂತೆ, ಕೋವಿಡ್ ಅನ್ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಯಾವ ರೀತಿ ತಪಾಸಣೆ ನಡೆಸಬೇಕು, ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಜತೆ ಚರ್ಚಿಸಿ ಮಾಡಲಾಗುವುದು. ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸುವ ಕುರಿತಂತೆ ತಂಡಗಳನ್ನು ರಚಿಸಿ ಪೊಲೀಸ್, ಕಂದಾಯ ಹಾಗೂ ಮಹಾನಗರ ಪಾಲಿಕೆಯಿಂದ ಆರೋಗ್ಯ ಇಲಾಖೆಯಲ್ಲಿ ತಂಡಗಳನ್ನು ರಚಿಸಿ ಸಂಸ್ಥೆಗಳಿಗೆ ಭೇಟಿ ನೀಡಿ ಉಲ್ಲಂಘನೆ ಕಂಡು ಬಂದರೆ ದಂಡ ಹಾಕುವುದು, ಪರವಾನಿಗೆ ರದ್ದುಪಡಿಸುವ ಕುರಿತಂತೆಯೂ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯನ್ನು ಪ್ರವೇಶಿಸುವ ಕೆಲವೊಂದು ಪ್ರಮುಖ ಗಡಿ ಪ್ರದೇಶಗಳಲ್ಲಿ ಟೆಸ್ಟಿಂಗ್ ಮಾಡಿಕೊಂಡು ಅವರ ಮಾಹಿತಿಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ನರ್ಸಿಂಗ್, ಇಂಜಿನಿರಿಂಗ್, ಪದವಿ ಕಾಲೇಜುಗಳಲ್ಲಿ ಕಾಸರಗೋಡು ಸೇರಿದಂತೆ ಕೇರಳದ ವಿದ್ಯಾರ್ಥಿಗಳು ಇರುವಲ್ಲಿ ತಪಾಸಣೆಗೊಳಪಡಿಸಲು ನಿರ್ಧರಿಸಲಾಗುವುದು. ಬಸ್ಸಿನಲ್ಲಿ ದಿನನಿತ್ಯ ಕೇರಳದಿಂದ ಜಿಲ್ಲೆಗೆ ಆಗಮಿಸುವವರಿಗೆ ಕನಿಷ್ಠ 15 ದಿನಗಳೊಮ್ಮೆ ತಪಾಸಣೆ ನಡೆಸಲಾಗುವುದು. ಪ್ರಾಯೋಗಿಕವಾಗಿ ಈ ಕಾರ್ಯದಲ್ಲಿ ಸಾಕಷ್ಟು ತೊಂದರೆ ಇದೆ. ಹಾಗಾಗಿ ಸಂಚಾರವನ್ನು ನಿರ್ಬಂಧಿಸದೆ ಕೊರೋನ ನಿಯಂತ್ರಣಕ್ಕೆ ಸವಾಲು ಇದ್ದು, ಅದನ್ನು ಜಿಲ್ಲಾಡಳಿತದಿಂದ ನಿರ್ವಹಿಸಿ, ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುವುದು.
6000ಕ್ಕೂ ಅಧಿಕ ವಿದ್ಯಾರ್ಥಿಗಳು ಕೇರಳ ರಾಜ್ಯದವರಾಗಿದ್ದು, ಅವರನ್ನು ಕಡ್ಡಾಯವಾಗಿ ಮಿಷನ್ ಮೋಡ್ನಲ್ಲಿ ತಪಾಸಣೆಗೊಳಿಸಲಾಗುವುದು. ವಿದ್ಯಾರ್ಥಿಗಳು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಬರುವಾಗ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಲು ಸೂಚಿಸಲಾಗುವುದು ಎಂದು ಅವರು ಹೇಳಿದರು.
0 التعليقات: