Thursday, 11 February 2021

ಹಿಮನದಿ ಸ್ಫೋಟ : ಸಾವಿನ ಸಂಖ್ಯೆ 36ಕ್ಕೆ ಏರಿಕೆ : ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಸ್ಥಳಾಂತರಕ್ಕೆ ಸಿಎಂ ಅನುಮೋದನೆ


ಹಿಮನದಿ ಸ್ಫೋಟ : ಸಾವಿನ ಸಂಖ್ಯೆ 36ಕ್ಕೆ ಏರಿಕೆ : ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಸ್ಥಳಾಂತರಕ್ಕೆ ಸಿಎಂ ಅನುಮೋದನೆ

ಚಮೋಲಿ : ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಉತ್ತರಾಖಂಡದಲ್ಲಿ 36 ಮಂದಿ ಮೃತ ಪಟ್ಟಿದ್ದಾರೆ ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಪೋವನ್ ಸುರಂಗದೊಳಗೆ ಸಿಲುಕಿಕೊಂಡಿರುವ ಸುಮಾರು 30 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿದೆ.

ಗುರುವಾರ ಅಲಕನಂದಾ ನದಿ ತೀರದಲ್ಲಿ ನಾಪತ್ತೆಯಾಗಿದ್ದ ಇನ್ನಿಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಪ್ರವಾಹದಿಂದಾಗಿ ಕಾಣೆಯಾದ 206 ಜನರ ಪೈಕಿ 36 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಾತಿ ಎಸ್ ಭಡಾರಿಯಾ ಖಚಿತಪಡಿಸಿದ್ದಾರೆ. ಉಳಿದ 168 ಜನರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಧೌಲಿಗಂಗಾ ನದಿಯ ತಪೋವನದಲ್ಲಿ ಎನ್ ಟಿಪಿಸಿಯ ಜಲವಿದ್ಯುತ್ ಯೋಜನೆಯ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಗುರುವಾರ ಸಭೆ ನಡೆಸಿದರು.

ಯೋಜನೆಯಿಂದ ಮೇಲ್ಮುಖವಾಗಿ ಹರಿಯುವ ನೀರಿನ ಹರಿವನ್ನು ತಾತ್ಕಾಲಿಕವಾಗಿ ತಡೆಯಿಂದ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಪರಾಮರ್ಶಿಸಿ, ಪರಿಸ್ಥಿತಿಯ ವಿಶ್ಲೇಷಣೆಗಾಗಿ ತಜ್ಞರನ್ನು ಒದಗಿಸುವಂತೆ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಡಿಆರ್ ಡಿಒಗೆ ನಿರ್ದೇಶನ ನೀಡಿದರು.

ತಪೋವನ್ ಸುರಂಗ ರಕ್ಷಣೆ

ತಪೋವನ್ ಸುರಂಗದೊಳಗೆ ಸುಮಾರು 7-8 ಮೀಟರ್ ಗಳಷ್ಟು ಆಳದಲ್ಲಿ ಕೊರೆದ ನಂತರ ಅಧಿಕಾರಿಗಳು ಗುರುವಾರ ಸಂಜೆ ಸುರಂಗ ಕೊರೆಯುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.

ಯಂತ್ರ ಬಳಸಿ ಕೆಸರು ತೆಗೆಯಲು ರಕ್ಷಣಾ ತಂಡಗಳಿಗೆ ಕಾರ್ಯಾಚರಣೆ ನಡೆಸಲು ಗಟ್ಟಿಯಾದ ಬಂಡೆಯೊಂದು ಕಟರ್ ಗಳಿಗೆ ಅಡ್ಡಿಯುಂಟಾಯಿತು. ಇದೀಗ ಡ್ರಿಲ್ಲಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಟುಂಬಗಳ ಸ್ಥಳಾಂತರಕ್ಕೆ ಸಿಎಂ ಒಪ್ಪಿಗೆ .

ಉತ್ತರಾಖಂಡದ ನಾಲ್ಕು ಜಿಲ್ಲೆಗಳಲ್ಲಿ ನೈಸರ್ಗಿಕ ವಿಕೋಪದಿಂದ ಅತ್ಯಂತ ಹಾನಿಗೊಳಗಾಗುವ ಪ್ರದೇಶಗಳಲ್ಲಿ ವಾಸಿಸುತ್ತಿರುವ 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಮಾಡಲು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಗುರುವಾರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸಿತ್ತು.

ಪ್ರಸ್ತಾವನೆಯ ಪ್ರಕಾರ ಉತ್ತರಕಾಶಿಯಿಂದ 30, ಚಮೋಲಿಯಿಂದ 13 ಮತ್ತು ಬಾಗೇಶ್ವರ ಮತ್ತು ತೆಹ್ರಿ ಜಿಲ್ಲೆಯ ತಲಾ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲಾಗುವುದು ಮತ್ತು ಪುನರ್ವಸತಿ ಕಲ್ಪಿಸಲಾಗುತ್ತದೆ.



SHARE THIS

Author:

0 التعليقات: