ಕಾಲುವೆಗೆ ಬಿದ್ದ ಬಸ್: 32 ಪ್ರಯಾಣಿಕರು ಮೃತ್ಯು, ಇನ್ನಷ್ಟು ಜನರು ಮುಳುಗಿರುವ ಭೀತಿ
ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಬಸ್ ವೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದಿದ್ದು, 32 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಜನರು ನೀರಿನಲ್ಲಿ ಮುಳುಗಿರುವ ಭೀತಿ ಇದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮವತ್ ತಿಳಿಸಿದ್ದಾರೆ.
ಬೆಳಗ್ಗೆ 8:30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಈ ವೇಳೆ ಕನಿಷ್ಠ 50 ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್ ಕಾಲುವೆಯಲ್ಲಿ ಮುಳುಗಿ ಹೋಗಿದ್ದು ಈಗ ಅದು ಕಣ್ಣಿಗೆ ಗೋಚರಿಸುತ್ತಿಲ್ಲ. ನೀರಿನ ಪ್ರವಾಹದಲ್ಲಿ ಸಿಲುಕಿ ಬಸ್ ಕೊಚ್ಚಿಹೋಗಿರುವ ಭೀತಿ ಇದೆ.
ಕನಿಷ್ಠ ಏಳು ಮಂದಿ ಈಜಿಕೊಂಡು ಕಾಲುವೆಯ ದಡ ಸೇರಿದ್ದು, ಇತರರು ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಹಿತಕರ ಘಟನೆಯ ಕಾರಣ ರಾಜ್ಯ ಸರಕಾರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಬೇಕಾಗಿದ್ದ ಸರಕಾರಿ ಕಾರ್ಯಕ್ರಮವನ್ನು ರದ್ದುಪಡಿಸಿದೆ.
0 التعليقات: