Friday, 26 February 2021

ಗುಜರಾತ್‌ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್


ಗುಜರಾತ್‌ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್

’ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಆದರೆ ಗುಜರಾತ್‌ನಲ್ಲಿ ಕೇವಲ ಒಂದು ಪಕ್ಷ ಮಾತ್ರ ಆಡಳಿತ ನಡೆಸುತ್ತಿದೆ’ - ಅರವಿಂದ್ ಕೇಜ್ರಿವಾಲ್

ಗುಜರಾತ್‌ನ ಸೂರತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಬಾರಿಯೇ ಆಪ್ 27 ಸ್ಥಾನಗಳಲ್ಲಿ ಜಯಗಳಿಸಿದೆ. ಈ ಹಿನ್ನೆಲೆ ಇಂದು (ಫೆ.26) ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಸೂರತ್‌ಗೆ ಭೇಟಿ ನೀಡಿ ಆಯ್ಕೆಯಾಗಿರುವ ಹೊಸ ಕಾರ್ಪೊರೇಟರ್‍ಸ್ ಮತ್ತು ಕಾರ್ಯಕರ್ತರನ್ನು ಅಭಿನಂದಿಸಿದರು.

ಗುಜರಾತ್‌ನ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 483 ಸ್ಥಾನಗಳಿಸಿದೆ. ಕಾಂಗ್ರೆಸ್ ಕೇವಲ 55 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಮೊದಲ ಬಾರಿಯೇ 27 ಸ್ಥಾನಗಳಲ್ಲಿ ಜಯಿಸುವ ಮೂಲಕ ಆಪ್ ಭರ್ಜರಿ ಆರಂಭ ಮಾಡಿದೆ. ಸೂರತ್‌ ಮಹಾನಗರ ಪಾಲಿಕೆಯ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ಶುಕ್ರವಾರ ಸೂರತ್‌ಗೆ ಭೇಟಿ ನೀಡಿರುವ ಆಪ್ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದ ನೂತನ ಕಾರ್ಪೋರೇಟರ್‍ಸ್ ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.  ’ಕಳೆದ ಕೆಲವು ದಿನಗಳಿಂದ ನಾನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹೇಳಿಕೆಗಳನ್ನು ಕೇಳುತ್ತಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶಗಳ ನಂತರ ಅವರು ಗೊಂದಲಕ್ಕೊಳಗಾಗಿದ್ದಾರೆ, ಸ್ವಲ್ಪ ಹೆದರಿದ್ದಾರೆ’ ಎಂದಿದ್ದಾರೆ. 

’ಈ ಪಕ್ಷಗಳು ನಿಮಗೆ( ಕಾರ್ಪೊರೇಟರ್‍ಸ್) ಅಥವಾ ಎಎಪಿಗೆ ಹೆದರುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆದರೆ, ನಿಮಗಾಗಿ ಮತ ಚಲಾಯಿಸಿದ ಜನರಿಂದ ಅವರು ಭಯಭೀತರಾಗಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ಮೇಲೆ ಹರಿಹಾಯ್ದಿರುವ ದೆಹಲಿ ಮುಖ್ಯಮಂತ್ರಿ, ’ಕಳೆದ 25 ವರ್ಷಗಳಿಂದ ಇಲ್ಲಿ ಬಿಜೆಪಿ ಒಂದೇ ಏಕೆ ಆಡಳಿತ ನಡೆಸುತ್ತಿದೆ..? ಎಂದು ಪ್ರಶ್ನಿಸಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಲ್ಲ, ಇಲ್ಲಿಯೂ ಬಹಳಷ್ಟು ಸಮಸ್ಯೆಗಳಿವೆ. ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಆದರೆ ಇಲ್ಲಿ ಕೇವಲ ಒಂದು ಪಕ್ಷ ಮಾತ್ರ ಆಡಳಿತ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಸೂರತ್ ಸ್ಥಳೀಯ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಗಮನಾರ್ಹ ಸಾಧನೆ ಗುಜರಾತ್‌ನಲ್ಲಿನ ಹೊಸ ರಾಜಕೀಯ ಆರಂಭದ ಸೂಚನೆ ಎಂದು ಅರವಿಂದ್ ಕೇಜ್ರಿವಾಲ್ ಫಲಿತಾಂಶದ ಬಳಿಕ ತಿಳಿಸಿದ್ದರು. ಇದು ಪ್ರಾಮಾಣಿಕತೆಗೆ ಸಿಕ್ಕ ಜಯವಾಗಿದೆ’ ಎಂದಿದ್ದರು.

125 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಜನತೆ ಆಪ್ ಕೈ ಹಿಡಿದಿದ್ದಾರೆ. ಆಪ್‌ನಿಂದ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯು ಪ್ರಾಮಾಣಿಕತೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದರು.

ಗುಜರಾತ್‌ನಲ್ಲಿ ಪ್ರಾಮಾಣಿಕ ರಾಜಕಾರಣ, ಉತ್ತಮ ಶಾಲೆಗಳಿಗಾಗಿ ರಾಜಕಾರಣ, ಕಡಿಮೆ ದರದಲ್ಲಿ 24 ಗಂಟೆಗಳ ವಿದ್ಯುತ್ ನೀಡುವುದು ನಮ್ಮ ಆದ್ಯತೆ. ಜನರ ಸಹಭಾಗಿತ್ವದೊಂದಿಗೆ ಗುಜರಾತ್‌ ಅನ್ನು ಅಭಿವೃದ್ದಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.SHARE THIS

Author:

0 التعليقات: