Tuesday, 2 February 2021

ಗಣಿಗಾರಿಕೆಗಳಿಂದ ಬಾಧಿತ ಪ್ರದೇಶಗಳ ಪರಿಸರ ಅಭಿವೃದ್ಧಿಗೆ 18ಸಾವಿರ ಕೋಟಿ ರೂ. ರಾಜಧನ ಸಂಗ್ರಹ


 ಗಣಿಗಾರಿಕೆಗಳಿಂದ ಬಾಧಿತ ಪ್ರದೇಶಗಳ ಪರಿಸರ ಅಭಿವೃದ್ಧಿಗೆ 18ಸಾವಿರ ಕೋಟಿ ರೂ. ರಾಜಧನ ಸಂಗ್ರಹ

ಬೆಂಗಳೂರು, ಫೆ.2- ಗಣಿಗಾರಿಕೆಗಳಿಂದ ಬಾಧಿತ ಪ್ರದೇಶಗಳ ಪರಿಸರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 18ಸಾವಿರ ಕೋಟಿ ರೂ. ರಾಜಧನ ಸಂಗ್ರಹವಾಗಿದ್ದು, ಅದಕ್ಕೆ 3ಸಾವಿರ ಕೋಟಿ ರೂ. ಬಡ್ಡಿ ಬೆಳೆದಿದೆ. ಸುಪ್ರೀಂಕೋರ್ಟ್‍ನ ಉಸ್ತುವಾರಿಯಲ್ಲಿ ಇದನ್ನು ಖರ್ಚು ಮಾಡಬೇಕಿದ್ದು, ಹಿರಿಯ ವಕೀಲರನ್ನು ನೇಮಿಸಿ ನ್ಯಾಯಾಲಯದ ಮುಂದೆ ಪ್ರಸ್ತಾವನೆ ಮಂಡಿಸಿ ಮೂರು ತಿಂಗಳ ಒಳಗಾಗಿ ಅನುದಾನ ಬಳಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ವಿಧಾನಪರಿಷತ್‍ನಲ್ಲಿಂದು ಜೆಡಿಎಸ್‍ನ ಸದಸ್ಯ ಕಾಂತರಾಜು ಅವರ ಪರವಾಗಿ ಹಿರಿಯ ಸದಸ್ಯ ಬಸವರಾಜಹೊರಟ್ಟಿ ಅವರು ಪ್ರಶ್ನೆ ಕೇಳಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನಿಂದ ಹಂಚಿಕೆಯಾಗುವ ಅನುದಾನದಲ್ಲಿ ವಿಧಾನಪರಿಷತ್ ಸದಸ್ಯರಿಗೆ ನೀಡಲಾಗುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ. ಶಾಸಕರಿಗೆ ಆದ್ಯತೆ ನೀಡಲಾಗುತ್ತಿದೆ. ಮೇಲ್ಮನೆ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧಪಟ್ಟಂತೆ ವಿಧಾನಪರಿಷತ್‍ನಲ್ಲಿ ಸದಸ್ಯರು ಪಕ್ಷಾತೀತವಾಗಿ ಚರ್ಚೆ ನಡೆಸಿದರು. ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಇದೊಂದೇ ಅಲ್ಲ ಎಲ್ಲಾ ಯೋಜನೆಗಳ ವಿಷಯದಲ್ಲೂ ವಿಧಾನಪರಿಷತ್ ಸದಸ್ಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲಾಗುತ್ತಿದೆ. ಇದು ನಿಲ್ಲಬೇಕು. ವಿಧಾನಸಭೆಯ ಸದಸ್ಯರಂತೆ ವಿಧಾನಪರಿಷತ್ ಸದಸ್ಯರನ್ನೂ ಕೂಡ ಸಮಾನಾಂತರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.

ಆಡಳಿತ ಪಕ್ಷದ ಶಾಸಕ ವೈ.ಎ.ನಾರಾಯಣಸ್ವಾಮಿ ಕೂಡ ಇದಕ್ಕೆ ಧ್ವನಿಗೂಡಿಸಿದರು. ಸಚಿವ ಮುರುಗೇಶ್ ನಿರಾಣಿ ಅವರು ಉತ್ತರ ನೀಡಿ, ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಟ್ರಸ್ಟ್‍ನಲ್ಲಿ ನೋಂದಾಯಿತ ಮತದಾನದ ಹಕ್ಕು ಹೊಂದಿರುವ ವಿಧಾನಪರಿಷತ್ ಸದಸ್ಯರು ಟ್ರಸ್ಟಿಗಳಾಗಿರುತ್ತಾರೆ. ಟ್ರಸ್ಟ್‍ಗೆ ಬರುವ ಅನುದಾನವನ್ನು ಸಮಾನವಾಗಿ ಹಂಚಲು ಸಾಧ್ಯವಿಲ್ಲ. ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಗಣಿಗಾರಿಕೆ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಿರುವ ಭಾಗಶಃ ಬಾಧಿತ ಪ್ರದೇಶಗಳಿಗೆ ಸ್ವಲ್ಪ ಪ್ರಮಾಣದ ಅನುದಾನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಆಗ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು, ವಿಧಾನಪರಿಷತ್ ಸದಸ್ಯರು ಯಾವುದೇ ಒಂದು ತಾಲ್ಲೂಕಿಗೆ ಸೀಮಿತವಾಗಿರುವುದಿಲ್ಲ ಎಂದಾಗ, ಕಾಂಗ್ರೆಸ್‍ನ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಮೇಲ್ಮನೆ ಸದಸ್ಯರಿಗೆ ಇಡೀ ರಾಜ್ಯದ ಅಧಿಕಾರ ವ್ಯಾಪ್ತಿ ಇರುತ್ತದೆ. ಆರು ವರ್ಷಗಳ ಕಾಲ ನಿತ್ಯ ಸುಮಂಗಲಿಯಾಗಿರುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕೆಲವು ವಿಧಾನಪರಿಷತ್ ಸದಸ್ಯರಿಗೆ ನಾಲ್ಕೈದು ಜಿಲ್ಲೆಗಳ ವ್ಯಾಪ್ತಿ ಇರುತ್ತದೆ. ಸರ್ಕಾರ ಮಾರ್ಗಸೂಚಿಯನ್ನು ಬದಲಾವಣೆ ಮಾಡಿ ಅನುದಾನ ನೀಡಿದರೆ ಗಣಿಬಾಧಿತ ಪ್ರದೇಶಗಳಿಗೆ ಸದಸ್ಯರು ಅನುದಾನ ನೀಡಿ ಕೆಲಸ ಮಾಡಿಸುತ್ತಾರೆ ಎಂದು ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಹೇಳಿದರು. ಜೆಡಿಎಸ್‍ನ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಗಣಿಗಾರಿಕೆ ನಡೆಯುತ್ತಿದ್ದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಿಂದ ರಾಜಧನ ಸಂಗ್ರಹ ಮಾಡಲಾಗುತ್ತಿದೆ.

ದೇಶದಲ್ಲಿ ಇದು ಲಕ್ಷಾಂತರ ಕೋಟಿ ರೂ. ಇದೆ. ಎಲ್ಲಾ ರಾಜ್ಯದಲ್ಲೂ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್‍ನ ಉಸ್ತುವಾರಿಯಲ್ಲೇ ಖರ್ಚು ಮಾಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಖರ್ಚಾಗುತ್ತಿಲ್ಲ ಎಂದು ವಿವರಣೆ ನೀಡಿದ ಮುರುಗೇಶ್ ನಿರಾಣಿ ಅವರು, 18 ಸಾವಿರ ಕೋಟಿ ರೂ.ಗಳ ರಾಜಧನ ಸಂಗ್ರಹಿಸಲಾಗಿದೆ. ಮೂರು ಸಾವಿರ ಕೋಟಿ ಬಡ್ಡಿ ಇದೆ. ಅದನ್ನು ಬಿಡುಗಡೆ ಮಾಡಿಸಲು ಶೀಘ್ರವ ಅಡ್ವೋಕೇಟ್ ಜನರಲ್ ಜತೆ ದೆಹಲಿಗೆ ಹೋಗುತ್ತೇನೆ.

ಹಿರಿಯ ವಕೀಲರನ್ನು ನೇಮಿಸಿ ನ್ಯಾಯಾಲಯದಿಂದ ಆ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಸದರಿ ಅನುದಾನದಲ್ಲಿ ತುಂಗಭದ್ರಾ ಅಣೆಕಟ್ಟೆಯಲ್ಲಿ ತುಂಬಿರುವ ಹೂಳು ತೆಗೆಸಿ ಎಂದು ಇಬ್ರಾಹಿಂ ಸಲಹೆ ನೀಡಿದರು. ಅಲ್ಲಂ ವೀರಭದ್ರಪ್ಪ ಅದಕ್ಕೆ ಧ್ವನಿಗೂಡಿಸಿದರು.


SHARE THIS

Author:

0 التعليقات: