ತಮಿಳು ನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ, 30ಕ್ಕೂ ಅಧಿಕ ಮಂದಿಗೆ ಗಾಯ
ಚೆನ್ನೈ: ತಮಿಳುನಾಡಿನ ವಿರುದುನಗರ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 30ಕ್ಕೂ ಅಧಿಕ ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಚೆನ್ನೈಯಿಂದ 500 ಕಿಲೋ ಮೀಟರ್ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿನ್ನೆ ಮಧ್ಯಾಹ್ನ ತಮಿಳುನಾಡಿನ ವೆಂಬಕೊಟ್ಟೈನ ಕೊಟ್ಟೈಪಾಟಿಯಲ್ಲಿರುವ ಅಚಂಕುಲಂನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೃತಪಟ್ಟವರ ಶವಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳು ನಾಡಿನ ವಿರುದುನಗರದಲ್ಲಿ ಸಂಭವಿಸಿದ ಪಟಾಕಿ ಫ್ಟಾಕ್ಟರಿ ದುರಂತ ತೀವ್ರ ದುಃಖವನ್ನುಂಟುಮಾಡಿದೆ. ಮೃತಪಟ್ಟವರ ಕುಟುಂಬಸ್ಥರಿಗೆ ಈ ಸಂದರ್ಭದಲ್ಲಿ ನಾನು ಸಾಂತ್ವನ ಹೇಳುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸ್ಫೋಟದಲ್ಲಿ 10 ಕೋಠಡಿಗಳು ನಾಶವಾಗಿದ್ದು, ಘಟನೆ ನಡೆದಾಗ ಕನಿಷ್ಟ 50 ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೇಶನ್ ಹೇಳಿದ್ದಾರೆ.ನಿನ್ನೆ ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದೆ.
ರಾಸಾಯನಿಕಗಳನ್ನು ಬೆರೆಸುವಾಗ ಉಂಟಾಗುವ ಘರ್ಷಣೆಯು ಸ್ಫೋಟಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
0 التعليقات: