ಪ.ಬಂಗಾಳ, ಕೇರಳ, ಅಸ್ಸಾಂ, ತ.ನಾಡು, ಪುದುಚೇರಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ
ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಶುಕ್ರವಾರ (ಫೆ.26) ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದ್ದಾರೆ
ಮಾರ್ಚ್ 27 ರಿಂದ ಮತದಾನ ಆರಂಭವಾಗಲಿದ್ದು, ಮೇ 2ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಈ ಬಾರಿ ಮತದಾನ ಅವಧಿಯನ್ನು 1 ಗಂಟೆ ಹೆಚ್ಚಿಸಲಾಗುವುದು, ಕೊರೊನಾದಿಂದಾಗಿ ಮತಗಟ್ಟೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ.ಮೇ 2ಕ್ಕೆ ಮತ ಏಣಿಕೆ ನಡೆಯಲಿದೆ.
ಅಸ್ಸಾಂ: ಅಸ್ಸಾಂ ರಾಜ್ಯದಲ್ಲಿ ಮೂರು ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತದ ಚುನಾವಣೆ ಆರಂಭವಾಗಿದೆ. 2ನೇ ಹಂತ ಏಪ್ರಿಲ್ 1, 3ನೇ ಹಂತ ಏಪ್ರಿಲ್ 6ಕ್ಕೆ ನಡೆಯಲಿದೆ.
ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಪ್ರಿಲ್ 6ರಂದು ಮತದಾನ ನಡೆಯಲಿದ್ದು, ಮೇ 2ಕ್ಕೆ ಮತ ಏಣಿಕೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ 294, ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಅಸ್ಸಾಂನಲ್ಲಿ 126 ಮತ್ತು ಕೇಂದ್ರ ಪ್ರದೇಶದ ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಈ ಚುನಾವಣೆಯಲ್ಲಿ 18 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆ.
ಪಶ್ವಿಮ ಬಂಗಾಳದಲ್ಲಿ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಚುನಾವಣೆಗೆ ಗೆಲ್ಲಲು ಭಾರೀ ಸಿದ್ದತೆ ನಡೆಸುತ್ತಿರುವ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಕಣಕ್ಕಿಳಿದರೆ, ಡಿಎಂಕೆಯೊಂದಿಗೆ ಕಾಂಗ್ರೆಸ್ ಅಖಾಡಕ್ಕಿಳಿಯಲಿದೆ. ಅಲ್ಲದೆ, ಸ್ಟಾರ್ ನಟ ಕಮಲ್ ಹಾಸನ್ ಅವರ ಪಕ್ಷವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಕೂಡ ಚುನಾವಣಾ ಕಣದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.
ಕೇರಳದಲ್ಲಿ ಎಡಪಕ್ಷಗಳ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಮಧ್ಯೆ ಹಣಾಹಣಿ ನಡೆಯಲಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿಯೂ ಕಣಕ್ಕೆ ಇಳಿದಿದೆ.
ರಾಜಕೀಯ ಹೈಡ್ರಾಮಕ್ಕೆ ವೇದಿಕೆಯಾಗಿದ್ದ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡು, ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚೇನು ಪ್ರಭಾವ ಬೀರದ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸದಲ್ಲಿದೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.