Monday, 4 January 2021

Reliance Jio: ಹರಿಯಾಣ ಪಂಜಾಬ್​ನಲ್ಲಿ ಮೊಬೈಲ್​ ಟವರ್ ಧ್ವಂಸ ಪ್ರಕರಣ; ನ್ಯಾಯಾಲಯದ ಮೊರೆಹೋದ ರಿಲಾಯನ್ಸ್​ ಜಿಯೋ


 Reliance Jio: ಹರಿಯಾಣ ಪಂಜಾಬ್​ನಲ್ಲಿ ಮೊಬೈಲ್​ ಟವರ್ ಧ್ವಂಸ ಪ್ರಕರಣ; ನ್ಯಾಯಾಲಯದ ಮೊರೆಹೋದ ರಿಲಾಯನ್ಸ್​ ಜಿಯೋ

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್​ಜೆಐಎಲ್) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಜನವರಿ 4ರಂದು ಅರ್ಜಿ ಸಲ್ಲಿಸಲಿದ್ದು, ದುಷ್ಕರ್ಮಿಗಳು ತನ್ನ ಸಂವಹನ ಮೂಲಸೌಕರ್ಯದ ವಿರುದ್ಧ ವಿಧ್ವಂಸಕ ಕೃತ್ಯವನ್ನು ನಡೆಸುತ್ತಿದ್ದಾರೆ. ರಿಲಾಯನ್ಸ್​ ಜಿಯೋ ಟವರ್​ಗಳನ್ನು ಧ್ವಂಸಗೊಳಿಸುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರದ ಹಸ್ತಕ್ಷೇಪವನ್ನು ಕೋರಿದೆ ಎನ್ನಲಾಗುತ್ತಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, "ಹಿಂಸಾಚಾರವು ತನ್ನ ಸಾವಿರಾರು ಉದ್ಯೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಮತ್ತು ಪ್ರಮುಖ ಸಂವಹನ ಮೂಲಸೌಕರ್ಯಕ್ಕೆ ಹಾನಿ ಮತ್ತು ಅಡ್ಡಿ ಉಂಟುಮಾಡಿದೆ. ಅಲ್ಲದೆ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಇದರ ಅಂಗಸಂಸ್ಥೆಗಳು ನಡೆಸುತ್ತಿರುವ ರಿಲಾಯನ್ಸ್​ ಫ್ರೆಶ್​ ಸೇವಾ ಮಳಿಗೆಗಳನ್ನೂ ಸಹ ಮುಚ್ಚಿಸಲಾಗುತ್ತಿದೆ" ಎಂದು ಆರೋಪಿಸಲಾಗಿದೆ. ಇತ್ತೀಚಿಗೆ ಕಳೆದ ಒಂದು ವಾರದಲ್ಲಿ ಪಂಜಾಬ್‌ನಲ್ಲಿ ಜಿಯೋ ಒಡೆತನದ ಸುಮಾರು 1,500 ಮೊಬೈಲ್ ಟವರ್‌ಗಳು ಮತ್ತು ಟೆಲಿಕಾಂ ಗೇರ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ. ಕೃಷಿ ಉತ್ಪನ್ನಗಳು ಮತ್ತು ಸರಕುಗಳ ಮಾರುಕಟ್ಟೆಯನ್ನು ಉದಾರೀಕರಣಗೊಳಿಸಲು ಪ್ರಯತ್ನಿಸುವ ಕೇಂದ್ರ ಸರ್ಕಾರದ ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ವೇಳೆ ಕೆಲವು ಗುಂಪುಗಳ ರೈತರು ಪಂಜಾಬ್‌ನ ಕೆಲ ಭಾಗಗಳಲ್ಲಿನ ರಿಲಾಯನ್ಸ್ ಫ್ರೆಶ್ ಮಳಿಗೆಗಳನ್ನು ಮುಚ್ಚಿದ್ದರು. ನೂತನ ಕೃಷಿ ಕಾನೂನುಗಳು ಕಾರ್ಪೊರೇಟ್ ಶೋಷಣೆಗೆ ದಾರಿ ಮಾಡಿಕೊಡುತ್ತವೆ ಮತ್ತು ತಮ್ಮ ಭೂಮಿಯನ್ನು ದೊಡ್ಡ ಸಂಸ್ಥೆಗಳು ಕಸಿದುಕೊಳ್ಳಬಹುದು ಎಂಬ ಭಯ ರೈತರಲ್ಲಿದೆ. ಇದೇ ಕಾರಣಕ್ಕೆ ರಿಲಾಯನ್ಸ್​ ಆಸ್ತಿಗಳ ಮೇಲೆ ದಾಳಿ ಸಂಘಟಿಸಲಾಗುತ್ತಿದ್ದು, ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ವ್ಯಾಪಾರ ಪ್ರತಿಸ್ಪರ್ಧಿಗಳಿಂದ ಪ್ರಚೋದಿಸಲ್ಪಟ್ಟವರಾಗಿದ್ದಾರೆ. ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಈ "ಪಟ್ಟಭದ್ರ ಹಿತಾಸಕ್ತಿಗಳು" ರಿಲಾಯನ್ಸ್ ವಿರುದ್ಧ ನಿರಂತರ ದುರುದ್ದೇಶಪೂರಿತ ಮತ್ತು ಪ್ರೇರಿತವಾದ ದುರುಪಯೋಗ ಅಭಿಯಾನವನ್ನು ಪ್ರಾರಂಭಿಸಿವೆ ಎಂದು ಆರೋಪಿಸಲಾಗಿದೆ.

ಇಂತಹ ಕೆಲಸದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ನ್ಯಾಯಾಲಯ ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ರಿಲಾಯನ್ಸ್​ ಜಿಯೋ ಮನವಿ ಸಲ್ಲಿಸಿದೆ.

ಅಲ್ಲದೆ, "ರೈತ ಅಭಿಯಾನದಲ್ಲಿ ರಿಲಾಯನ್ಸ್​ ಕುರಿತು ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಚರ್ಚೆಯಾಗುತ್ತಿರುವ ಮೂರು ಕೃಷಿ ಕಾನೂನುಗಳೊಂದಿಗೆ ರಿಲಯನ್ಸ್‌ಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಈ ಕಾನೂನುಗಳ ಮೂಲಕ ರಿಲಾಯನ್ಸ್​ ಕಂಪೆನಿಗೆ ಯಾವುದೇ ಲಾಭವೂ ಇಲ್ಲ" ಎಂದು ಸ್ಪಷ್ಟಪಡಿಸಲಾಗಿದೆ.


SHARE THIS

Author:

0 التعليقات: