ವಾಷಿಂಗ್ಟನ್: ರೈತರನ್ನು ಬೆಂಬಲಿಸಿ ಖಾಲಿಸ್ತಾನ್ ಸದಸ್ಯರಿಂದ ಭಾರತ ವಿರೋಧಿ ಘೋಷಣೆ
ವಾಷಿಂಗ್ಟನ್: ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಖಾಲಿಸ್ತಾನ್ ಪ್ರತ್ಯೇಕವಾದಿಗಳು ಮಂಗಳವಾರ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸಿದರು.
ರೈತರನ್ನು ಬೆಂಬಲಿಸಿದ ಖಾಲಿಸ್ತಾನ್ ಪ್ರತ್ಯೇಕವಾದಿ ಸದಸ್ಯರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು.
ಭಾರತೀಯ ರಾಯಭಾರ ಕಚೇರಿ ಮುಂಭಾಗದಲ್ಲಿ ಭಿತ್ತಿಚಿತ್ರಗಳೊಂದಿಗೆ ಜಮಾಯಿಸಿದ ಖಾಲಿಸ್ತಾನ್ ಸದಸ್ಯರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನರೆಂದರ್ ಸಿಂಗ್, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದರು. ಪ್ರತಿ ವರ್ಷ ಜನವರಿ 26 ದಿನವನ್ನು ನಾವು 'ಕಪ್ಪು ದಿನ'ವಾಗಿ ಆಚರಿಸುತ್ತೇವೆ. ಆದರೆ ಈ ವರ್ಷ ನಾವು ಭಾರತೀಯ ರೈತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇವೆ. ಅವರು ಕೇವಲ ಸಿಖ್ಖರಲ್ಲ. ಇಡೀ ದೇಶದ ಧರ್ಮಗಳಿಗೆ ಸೇರಿದವರು ಎಂದು ಹೇಳಿದರು.
ಒಂದು ತಿಂಗಳ ಹಿಂದೆಯಷ್ಟೇ ವಾಷ್ಟಿಂಗನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಖಾಲಿಸ್ತಾನ್ ಧ್ಜಜ ಕಟ್ಟಲಾಗಿತ್ತು. ಇದರಿಂದಾಗಿ ರಾಯಭಾರಿ ಕಚೇರಿ ಹಾಗೂ ಗಾಂಧಿ ಪ್ರತಿಮೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು.
ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ತಿರುಗಿತ್ತು. ನಾವು ಹಿಂಸಾಚಾರವನ್ನು ನಂಬುವುದಿಲ್ಲ. ಆದರೆ ಭಾರತ ಸರ್ಕಾರವು ಹಿಂಸಾಚಾರವನ್ನು ಬಯಸಿದರೆ ಸಿಖ್ಖರು ಹಿಂಸಾತ್ಮಕ ರೂಪ ತಾಳುತ್ತಾರೆ ಎಂದು ವಾಷ್ಟಿಂಗನ್ ಡಿಸಿಯಲ್ಲಿ ಪ್ರತಿಭಟನಾಕಾರರೊಬ್ಬರು ತಿಳಿಸಿದರು.
ಅಮೆರಿಕದ ಇತರೆ ಪ್ರಮುಖ ನಗರ ಹಾಗೂ ಕೆನಡಾದಲ್ಲೂ ಇದಕ್ಕೆ ಸಮಾನವಾಗಿ ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆದಿದೆ.
0 التعليقات: