Saturday, 30 January 2021

ಮಹಾರಾಷ್ಟ್ರ ಸಿಎಂ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ : ಸಿದ್ದರಾಮಯ್ಯ


 ಮಹಾರಾಷ್ಟ್ರ ಸಿಎಂ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ : ಸಿದ್ದರಾಮಯ್ಯ

ಬೆಂಗಳೂರು,ಜ.31- ಗಡಿಯ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಇವರ ಉದ್ದಟತನವನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 190ನೇ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ತಮ್ಮ ಉಳಿವಿಗಾಗಿ ಗಡಿ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿನ ಒಂದೇ ಒಂದು ಇಂಚು ಜಾಗ ಸಹ ಮಹಾರಾಷ್ಟ್ರಕ್ಕೆ ಸೇರಿದ್ದಲ್ಲ. ಕನ್ನಡಿಗರಾದ ನಾವು ನಮ್ಮ ನೆಲ, ನೀರು, ಸಂಸ್ಕøತಿ ಮತ್ತು ಭಾಷೆಯನ್ನು ರಕ್ಷಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದರು.

ಬೆಳಗಾವಿ ಸೇರಿದಂತೆ ಗಡಿಯ ಎಲ್ಲಾ ಜಿಲ್ಲೆಗಳು ಕರ್ನಾಟಕದ ಅವಿಭಾಜ್ಯ ಅಂಗ. ಆದರೆ ಉದ್ಧವ್ ಠಾಕ್ರೆ ಅವರು ಮಾತ್ರ ಈ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸ್ಥಳಗಳ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಅವರಿಗಿಲ್ಲ. ನಮ್ಮ ಔದಾರ್ಯದಿಂದಾಗಿ ನಾವು ಅನ್ಯ ಭಾಷಿಗರೊಂದಿಗೂ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಇದು ನಮ್ಮಲ್ಲಿನ ಕೊರತೆ. ಆದರೆ ಕನ್ನಡ ನಾಡಿನಲ್ಲಿ ಕನ್ನಡವೇ ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ನಿತ್ಯ ಒಂದೊಂದು ವಿಷಯವಾಗಿ ಮಹಾರಾಷ್ಟ್ರ ಸಿಎಂ ಕ್ಯಾತೆ ತೆಗೆಯುತ್ತಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿರುವ ಗಡಿ ತಕರಾರಿನ ಬಗ್ಗೆ ತೀರ್ಪು ಬರುವವರೆಗೂ ಕಾಯಲೇಬೇಕು. ಅನಗತ್ಯವಾಗಿ ಕಾಲು ಕೆರೆದುಕೊಂಡುಬಂದರೆ ನಾವು ಸಿಂಹಸ್ವಪ್ನವಾಗಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದರು.

ಸಮಾರಂಭದಲ್ಲಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಎಚ್.ರವೀಂದ್ರ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತಿತರರು ಇದ್ದರು.


SHARE THIS

Author:

0 التعليقات: