ಹೊತ್ತಿ ಉರಿಯುತ್ತಿರುವ ಮಣಿಪುರ ಗಡಿ:ಹೆಲಿಕಾಪ್ಟರ್ಗಳ ಕಾರ್ಯಾಚರಣೆಗೂ ಮಣಿಯದ ಝಕೋವು ಕಾಡ್ಗಿಚ್ಚು
ಗುವಾಹಟಿ,ಜ.3: ನಾಗಾಲ್ಯಾಂಡ್ನಿಂದ ನೆರೆಯ ಮಣಿಪುರ ದವರೆಗೂ ವ್ಯಾಪಿಸಿರುವ ಝಕೋವು ಕಣಿವೆಯಲ್ಲಿ ರೌದ್ರಾವತಾರ ವನ್ನು ಮೆರೆಯುತ್ತಿರುವ ಕಾಡ್ಗಿಚ್ಚನ್ನು ಶಮನಿಸಲು ಭಾರತೀಯ ವಾಯುಪಡೆಯ ನಾಲ್ಕು ಹೆಲಿಕಾಪ್ಟರ್ಗಳು ರವಿವಾರ ಮತ್ತೆ ಕಾರ್ಯಾಚರಣೆಗಿಳಿದಿದ್ದರೂ, ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ.
ಡಿ.29ರಂದು ಆರಂಭಗೊಂಡ ಕಾಳ್ಗಿಚ್ಚನ್ನು ನಂದಿಸಲು ಎನ್ಡಿಆರ್ಎಫ್ ತಂಡ,ಅಗ್ನಿಶಾಮಕ ದಳ ಮತ್ತು ಸ್ಥಳೀಯ ಸ್ವಯಂಸೇವಕರೂ ಹೆಣಗಾಡುತ್ತಿದ್ದಾರೆ.
ಐಎಎಫ್ ಹೆಲಿಕಾಪ್ಟರ್ಗಳು ಮೂರು ದಿನಗಳಿಂದ ದಿಮಾಪುರದಿಂದ ನಾಗಾಲ್ಯಾಂಡ್ಗೆ ಹಾರಾಟ ನಡೆಸುತ್ತ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ಐದು ದಿನಗಳ ಹಿಂದೆ ನಾಗಾಲ್ಯಾಂಡ್ನಲ್ಲಿ ಕಾಣಿಸಿಕೊಂಡ ಬೃಹತ್ ಬೆಂಕಿ ನೆರೆಯ ಮಣಿಪುರಕ್ಕೂ ವ್ಯಾಪಿಸಿದ್ದು,ಕೇಂದ್ರ ಸರಕಾರವು ಅಗ್ನಿಶಾಮಕ ಕಾರ್ಯಾಚರಣೆಗೆ ಎಲ್ಲ ಅಗತ್ಯ ನೆರವು ಒದಗಿಸುವುದಾಗಿ ಭರವಸೆಯನ್ನು ನೀಡಿದೆ. ಅದು ಶನಿವಾರ ಎನ್ಡಿಆರ್ಎಫ್ ತಂಡವನ್ನು ಝಕೋವು ಕಣಿವೆಯ ಮಣಿಪುರ ಭಾಗಕ್ಕೆ ರವಾನಿಸಿದ್ದು,ಅಲ್ಲಿ ರಾಜ್ಯ ಅಗ್ನಿಶಾಮಕ ದಳದ 200ಕ್ಕೂ ಅಧಿಕ ಸಿಬ್ಬಂದಿ ದಾವಾನಲದ ವಿರುದ್ಧ ಹೋರಾಡುತ್ತಿದ್ದಾರೆ.
ಎನ್ಡಿಆರ್ಎಫ್ನ 60 ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿದೆ. ಎರಡು ಹೆಲಿಕಾಪ್ಟರ್ಗಳೂ ಬಾಂಬಿ ಬಕೆಟ್ಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ರವಿವಾರ ಟ್ವೀಟಿಸಿದ್ದಾರೆ.
ಝಕೋವು ಕಣಿವೆಯಲ್ಲಿ ಭಾಗಶಃ ಬೆಂಕಿಯನ್ನು ನಂದಿಸುವಲ್ಲಿ ರಾಜ್ಯ ಅಗ್ನಿಶಾಮಕ ದಳವು ಯಶಸ್ವಿಯಾಗಿದೆ,ಆದರೆ ದಕ್ಷಿಣದ ಪ್ರದೇಶದಲ್ಲಿ ಬೆಂಕಿಯನ್ನು ಇನ್ನೂ ನಿಯಂತ್ರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿಶ್ವವಿಖ್ಯಾತ ಚಾರಣ ತಾಣವಾಗಿರುವ ಝಕೋವು ಕಣಿವೆಯಲ್ಲಿನ ಅರಣ್ಯ ಸಂಪತ್ತು ಕಾಳ್ಗಿಚ್ಚಿನಿಂದಾಗಿ ಭಾರೀ ಪ್ರಮಾಣದಲ್ಲಿ ನಾಶಗೊಂಡಿರಬಹುದು ಮತ್ತು ಕಣಿವೆಯಲ್ಲಿನ ಶ್ರೀಮಂತ ಜೀವವೈವಿಧ್ಯತೆಗೆ ಭಾರೀ ಹಾನಿಯನ್ನುಂಟು ಮಾಡಿರಬಹುದು ಎಂದು ಉಭಯ ರಾಜ್ಯಗಳ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುರುವಾರ ಎನ್.ಬೀರೇನ್ ಸಿಂಗ್ ಅವರು ಪ್ರದೇಶದ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದರು. ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ ಅವರೂ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದರು.
0 التعليقات: